ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್
ಚಿತ್ರದುರ್ಗ, (ನ. 09) : ಸರ್ಕಾರ ಯಾವುದೇ ಮುಂಜಾಗ್ರತೆ ಇಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ, ಇದರ ಬಗ್ಗೆ ವಿದ್ಯಾರ್ಥಿಗಳಿಗಾಗಲಿ, ಪೋಷಕರಿಗಾಗಲಿ ಯಾವುದೇ ರೀತಿಯ ಮಾಹಿತಿ ಇಲ್ಲ ಇದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ, ಇದರ ಬಗ್ಗೆ ಪೂರ್ಣವಾಗಿ ಚರ್ಚೆಯಾದ ನಂತರ ಜಾರಿ ಮಾಡುವಂತೆ ಸರ್ಕಾರವನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೀರ್ತಿಗಣೇಶ್ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಪಂಚವೇ ಕೋವಿಡ್-19 ನಲ್ಲಿ ನರಳುತ್ತಿರುವ ಸಮಯದಲ್ಲಿ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ ಇದರ ಬಗ್ಗೆ ಯಾರಿಗೂ ಸಹಾ ಮಾಹಿತಿ ಇಲ್ಲ, ಇದನ್ನು ಅನುಭವಿಸುವ ವಿದ್ಯಾರ್ಥಿಗಳಿಗೆ ಸಹಾ ಇದರ ಬಗ್ಗೆ ಯಾವೊಂದು ಸಹಾ ಸುಳಿವು ಸಹಾ ಇಲ್ಲ, ಪೋಷಕರಿಗೆ ಇದರ ಗಂಧವೇ ಗೊತ್ತಿಲ್ಲ ಇಂತಹ ಸಮಯದಲ್ಲಿ ಸರ್ಕಾರ ಇದನ್ನು ಜಾರಿ ಮಾಡುವುದರ ಮೂಲಕ ವಿದ್ಯಾರ್ಥಿ ಮತ್ತು ಪೋಷಕರನ್ನು ಗೊಂದಲಕ್ಕೆ ಈಡು ಮಾಡುತ್ತಿದೆ ಎಂದು ಕೀರ್ತಿ ಗಣೇಶ್ ಆರೋಪಿಸಿದರು.
ಇಂದಿನ ದಿನಮಾನದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸರ್ಕಾರ ನೀಡುವ ವಿವಿಧ ರೀತಿಯ ಸ್ಕಾಲರ್‍ಶಿಪ್‍ನ ಮೇಲೆ ಓದುತ್ತಿದ್ದಾರೆ. ಸರ್ಕಾರ ಎನ್.ಇ.ಪಿ.ಯನ್ನು ಜಾರಿ ಮಾಡಿದರೆ ಮುಂಚೆ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ ಶಿಪ್ ನಿಂತು ಹೋಗುತ್ತದೆ ಇದರಿಂದ ಬಹಳಷ್ಟು ವಿದ್ಯಾರ್ಥಿಗಳ ಕಲಿಕೆಯ ಕನಸು ನನಸಾಗದೇ ಕನಸಾಗಿಯೇ ಉಳಿಯುತ್ತದೆ, ಇದರ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ರಾಜ್ಯದಲ್ಲಿ ಜಿಲ್ಲಾವಾರು ಪ್ರವಾಸವನ್ನು ಪ್ರಾರಂಭ ಮಾಡಲಾಗಿದೆ ಈ ಯೋಜನೆಯ ಸಾಧಕ ಭಾಧಕಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.
ಸರ್ಕಾರ ಶಿಕ್ಷಣವನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ ಈ ರೀತಿಯಾದ ಯೋಜನೆಯನ್ನು ಯಾವುದೇ ರೀತಿಯ ಚರ್ಚೆ ಇಲ್ಲದೆ ಜಾರಿ ಮಾಡುತ್ತಿದೆ, ಇದರ ಬಗ್ಗೆ ಕಾಂಗ್ರೇಸ್ ಹೋರಾಟವನ್ನು ಮಾಡುತ್ತಿದೆ. ವಿದ್ಯಾರ್ಥಿಗಳನ್ನು ಸರ್ಕಾರ ಪಶುಗಳ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ತನ್ನ ಹೊಸದಾದ ಶಿಕ್ಷಣ ಮೇಲಿನ ಪ್ರಯೋಗವನ್ನು ಇವರ ಮೇಲೆ ಜಾರಿ ಮಾಡುತ್ತಿದೆ. ನಮ್ಮ ಪ್ರವಾಸದ ನಂತರ ಇದರ ಬಗ್ಗೆ ವರದಿಯನ್ನು ತಯಾರು ಮಾಡಿ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಕೀರ್ತಿ ಗಣೇಶ್ ತಿಳಿಸಿದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ತಾಜ್‍ಪೀರ್,ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನಿ ಗೌಡ, ಎನ್.ಎಸ್.ಯು.ಐನ ಪ್ರಧಾನ ಕಾರ್ಯದರ್ಶಿ ರಫೀ ಕಲೀಲ್, ಮೈಲಾರಪ್ಪ, ಮಮತ, ಹನುಮಂತಪ್ಪ ಗೊಡೆಮನೆ, ವಿನಯ್ ಸಂದೀಪ್,ನಜ್ಮತಾಜ್ ಸೇರಿದಂತೆ ಇತರರು ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.