ರಾಷ್ಟ್ರೀಯ ಡೆಂಗೀ ದಿನಾಚರಣೆ: ಜಾಗೃತಿ ಜಾಥಾಕ್ಕೆ ಡಾ.ಆರ್.ರಂಗನಾಥ್ ಚಾಲನೆ

2 Min Read

 

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮೇ.17) : ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಬುಧವಾರ ಚಾಲನೆ ನೀಡಿದರು.

ನಗರದ ಕೆಳಗೋಟೆಯ ಜನಸಾಗರ ಪ್ರಿಂಟ್ ಪ್ರೆಸ್ ಸಮೀಪ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗೀ ದಿನ-“ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗೀಯನ್ನು ಸೋಲಿಸೋಣ” ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಮಳೆಗಾಲ ಪ್ರಾರಂಭವಾಗಿರುವುದರಿಂದ ಸೊಳ್ಳೆಗಳು ಹೆಚ್ಚಾಗಿದ್ದು, ನೀರು ಶೇಖರಣಾ ಪರಿಕರಗಳು ಹಾಗೂ ಮನೆಯ ಸುತ್ತಮುತ್ತಲಿನಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಘನತ್ಯಾಜ್ಯ ವಸ್ತುಗಳು ಸೂಕ್ತ ವಿಲೇವಾರಿ ಮಾಡುವುದು. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು. ಸೊಳ್ಳೆ ಪರದೆ, ಸೊಳ್ಳೆಬತ್ತಿ, ಸೊಳ್ಳೆ ನಿರೋಧಕಗಳನ್ನು ಬಳಸುವುದು ಹಾಗೂ ಯಾವುದೇ ಜ್ವರ ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶೀ ಮಾತನಾಡಿ, ಡೆಂಗೀ ಒಂದು ವೈರಸ್ ಕಾಯಿಲೆಯಾಗಿದ್ದು, ಸೊಳ್ಳೆಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೃತಕವಾದ ನೀರು ಶೇಖರಣಾ ಪರಿಕರಗಳನ್ನು ವಾರಕ್ಕೆ ಎರಡು ಬಾರಿ ಖಾಲಿ ಮಾಡಿ ನೀರು ತುಂಬಿಸಿ, ಮುಚ್ಚಳದಿಂದ ಮುಚ್ಚುವುದು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿ, ವೈದ್ಯರ ಸಲಹೆ ಪಡೆಯಿರಿ. ದ್ರವರೂಪದ ಆಹಾರ ಪದಾರ್ಥಗಳನ್ನು ಸೇವಿಸಿ ವಿಶ್ರಾಂತಿ ಪಡೆಯಿರಿ ಎಂದರು.

ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಜಾಗೃತಿ ಜಾಥಾವು ಚಿತ್ರದುರ್ಗ ನಗರದ ಕೆಳಗೋಟೆಯ ಜನಸಾಗರ ಪ್ರಿಂಟಿಂಗ್ ಪ್ರೆಸ್‍ನಿಂದ ಆರಂಭವಾಗಿ ಏಕಲವ್ಯ ವೃತ್ತ, ಭುವನೇಶ್ವರಿ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದ ಮೂಲಕ ಚನ್ನಕೇಶವ ದೇವಸ್ಥಾನದವರಗೆ ಜಾಥಾ ನಡೆಯಿತು.

ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷಿತಾಧಿಕಾರಿಗಳು ಡೆಂಗೀ ನಿಯಂತ್ರಣದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಕರಪತ್ರಗಳನ್ನು ಹಂಚುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ, ಹಿರಿಯ ಆರೋಗ್ಯ ಮೇಲ್ವಿಚಾರಕ ಎಂ.ಬಿ.ಹನುಮಂತಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ.ಶ್ರೀನಿವಾಸ್, ಬಿ.ಆರ್.ನಾಗರಾಜ್, ಗುರುಮೂರ್ತಿ, ಹೆಚ್.ಎ.ನಾಗರಾಜ್, ಬಿ.ಆರ್.ಪಾಂಡು, ರುದ್ರಮುನಿ, ಸಿರೀಶ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *