ಹೊಳಲ್ಕೆರೆ, (ಏ.25) : ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಚುನಾವಣೆ ಮುನ್ನ ನೀಡಿದ್ದ ಒಂದೂ ಭರವಸೆ ಈಡೇರಿಸದೆ ವಚನಭ್ರಷ್ಟವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದರು.
ತಾಲೂಕಿನ ಗುಂಡೇರಿ, ಮಾಳೇನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಮಂಗಳವಾರ ಮತಪ್ರಚಾರ ಸಂದರ್ಭ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಶೇ.10 ಪರ್ಸೆಂಟ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದ ನರೇಂದ್ರ ಮೋದಿ, ಈಗ 40 ಪರ್ಸೆಂಟ್ ಸರ್ಕಾರದ ಪರ ಪ್ರಚಾರ ನಡೆಸುವ ಕೆಟ್ಟ ಪರಿಸ್ಥಿತಿಗೆ ಬಂದಿದ್ದಾರೆ ಎಂದರು.
ಗುತ್ತಿಗೆದಾರ ಸಂಘ ಬರೆದ ಪತ್ರಕ್ಕೆ ಉತ್ತರಿಸಲು ಸಾಧ್ಯವಾಗಿಲ್ಲ. ಬಿಜೆಪಿ ಭ್ರಷ್ಟಚಾರಕ್ಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಹೊಳಲ್ಕೆರೆ ಕ್ಷೇತ್ರದಲ್ಲಿ ಶಾಸಕರ ಅಹಂಕಾರ, ಭ್ರಷ್ಟಚಾರಕ್ಕೆ ಗುತ್ತಿಗೆದಾರರು, ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಮನನೊಂದು ಕಣ್ಣೀರು ಹಾಕುತ್ತಿದ್ದಾರೆ ಎಂದರು ಹೇಳಿದರು.
ಕೆರೆ ಹೂಳೆತ್ತುವುದು, ರಸ್ತೆ ಕಾಮಗಾರಿ ಈ ಎರಡು ಯೋಜನೆಯಲ್ಲಿಯೇ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆಗಿದೆ. ಈ ಕಾರಣಕ್ಕೆ ಈ ಕುರಿತು ತನಿಖೆ ನಡೆಸಿ ಭ್ರಷ್ಟರನ್ನು ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಕ್ಷೇತ್ರದಲ್ಲಿ ನಾನು ಗೆದ್ದು ಶಾಸಕನಾಗಿದ್ದ ಸಂದರ್ಭದಲ್ಲಿ ಒಂದು ಸಣ್ಣ ಗಲಾಟೆ ಆಗದಂತೆ ಮಾಡಲಾಗಿದ್ದೇ. ಆದರೆ, ಈಗ ಒಂದು ಸಮುದಾಯದ ವ್ಯಕ್ತಿ ಮತ್ತೊಂದು ಸಮುದಾಯದ ವ್ಯಕ್ತಿಯ ತಲೆಗೆ ಇಟ್ಟಿಗೆಯಿಂದ ಮಾರಾಣಾಂತಿಕ ಹಲ್ಲೆ ನಡೆಸಿ, ಈಗ ರಾಜಾರೋಷವಾಗಿ ಓಡಾಡುತ್ತಿದ್ದಾನೆ. ಇದಕ್ಕೆ ಕ್ಷೇತ್ರದ ಶಾಸಕರ ಕುಮ್ಮುಕ್ಕೇ ಕಾರಣ ಎಂದು ದೂರಿದರು.
ಜನರಲ್ಲಿ ಭಯ, ಭೀತಿ ಸೃಷ್ಟಿಸಿ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದರಿಂದ ಕ್ಷೇತ್ರದ ಹಲವು ಹಳ್ಳಿಗಳಿಗೆ ಶಾಸಕರ ಪ್ರವೇಶವನ್ನೇ ಜನರು ಸ್ವಯಂ ಆಗಿ ನಿರ್ಬಂಧಿಸಿದ್ದಾರೆ. ಗಲಭೆ, ದೌರ್ಜನ್ಯ, ಭ್ರಷ್ಟಾಚಾರಕ್ಕೆ ತಕ್ಕ ಪಾಠ ಕಲಿಸಲು ಮೇ 10ರ ಮತದಾನದ ದಿನಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಈ ಹಿಂದೆ ಪ್ರಾಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.99ರಷ್ಟನ್ನು ಸಿದ್ದರಾಮಯ್ಯ ಸರ್ಕಾರ ಈಡೇರಿಸಿತ್ತು. ಈಗಲೂ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಸಹಾಯಧನ, ಪ್ರತಿ ಮನೆಗೆ ಉಚಿತ 200 ಯೂನಿಟ್ ವಿದ್ಯುತ್ ನೀಡುವ ಭರವಸೆಯನ್ನು ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಅನುಷ್ಠಾನಕ್ಕೆ ತರಲಾಗುವುದು. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಡಬಲ್ ಇಂಜಿನ್ ಸರ್ಕಾರದ ಮೂಲಕ ಸ್ವರ್ಗವನ್ನೇ ಭೂಮಿಗೆ ಇಳಿಸುತ್ತೇವೆ ಎಂಬ ಭ್ರಮೆ ಜನರಲ್ಲಿ ಭಿತ್ತಿ, ಈಗ ಬೆಲೆ ಏರಿಕೆ ಮೂಲಕ ಬಡಜನರ ಬದುಕನ್ನು ಕಿತ್ತುಕೊಳ್ಳಲಾಗಿದೆ ಎಂದು ದೂರಿದರು.
ಚಿನ್ನದರಸ್ತೆ, ಕಪ್ಪು ಹಣ ವಿದೇಶದಿಂದ ವಾಪಸ್ಸು, ಪ್ರತಿ ವ್ಯಕ್ತಿ ಖಾತೆಗೆ 15 ಲಕ್ಷ ರೂಪಾಯಿ ಹೀಗೆ ಅನೇಕ ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ಪಕ್ಷ ಪ್ರಥಮ ಬಾರಿಗೆ ಮಾಡಿದ್ದು ಬಡ, ಮಧ್ಯಮ ಜನರ ಜೇಬಿಗೆ ಕೈ ಹಾಕಿದ್ದು ಎಂದು ಆರೋಪಿಸಿದರು.
400 ರೂಪಾಯಿ ಇದ್ದ ಸಿಲಿಂಡರ್ ಈಗ ಸಾವಿರದ ಗಡಿ ದಾಟಿದೆ. ಅಡುಗೆ ಎಣ್ಣೆ, ಬೇಳೆಕಾಳು ಸೇರಿ ಅಗತ್ಯ ವಸ್ತುಗಳು ಬೆಲೆ ದಾಖಲೆ ಮಟ್ಟದಲ್ಲಿ ಗಗನಕ್ಕೆ ಏರಿದೆ. ಪೆಟ್ರೋಲ್, ಡಿಸೇಲ್ ಬೆಲೆ ಪೈಪೋಟಿ ರೀತಿ ದಿನೇ ದಿನೆ ಹೆಚ್ಚುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಫಲ ಎಂದು ಹೇಳಿದರು.
ಕಾಂಗ್ರೆಸ್ ಬಡಜನರ ಪಕ್ಷ. ನಾನು ಶಾಸಕನಾಗಿದ್ದಾಗ ಕ್ಷೇತ್ರದ ಜನರಿಗೆ ಸಾಕಷ್ಟು ನಿವೇಶನದ ಹಕ್ಕುಪತ್ರವನ್ನು ನೀಡಿದ್ದೇನೆ. ಜನರು ನೆಮ್ಮದಿಯಿಂದ ಜೀವಿಸಬೇಕಾದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಕ್ಷೇತ್ರದಲ್ಲಿ ಆಂಜನೇಯ ಹೆಚ್ಚು ಮತಗಳ ಅಂತರದಿಂದ ಗೆಲ್ಲಬೇಕು ಎಂದರು.
ಜಿಪಂ ಮಾಜಿ ಸದಸ್ಯರಾದ ಲೋಹಿತ್‍ಕುಮಾರ್, ರಂಗಸ್ವಾಮಿ, ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಕಿರಣ್ ಕುಮಾರ್ ಯಾದವ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಕೆಪಿಸಿಸಿ ಸಂಯೋಜಕ ಟಿ.ಲೋಕೇಶ್ ನಾಯ್ಕ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಧು ಪಾಲೇಗೌಡ, ತಾಲೂಕು ಯುವ ಘಟಕದ ಅಧ್ಯಕ್ಷ ರಂಗಸ್ವಾಮಿ, ಗುಂಡೇರಿ ಗಿರೀಶ್, ಪರಿಮಳ ಗಿರೀಶ್ ನಾಡಿಗ್, ಗೌಡರು ಜಯಣ್ಣ , ವೈಶಾಖ ಯಾದವ್ ಉಪಸ್ಥಿತರಿದ್ದರು.