ಚಿತ್ರದುರ್ಗ : ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನವಂಬರ್ 23 ಮತ್ತು 24 ವರೆಗೆ ಎರಡು ದಿನಗಳ ಕಾಲ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನನ್ನನಾಡು ನನ್ನಹಾಡು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನವಂಬರ್ 23 ರಂದು ಮಧ್ಯಾಹ್ನ ಎರಡು ಗಂಟೆಗೆ ನನ್ನ ನಾಡು ನನ್ನ ಹಾಡು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆಎಂ.ಶಿವಸ್ವಾಮಿ ಉದ್ಘಾಟಿಸುವರು. ಮುಖ್ಯಶಿಕ್ಷಕ ಬಿ.ವಿ.ನಾಥ್ ಅಧ್ಯಕ್ಷತೆ ವಹಿಸುವರು.
ಶ.ಸಾ.ಪ ಜಿಲ್ಲಾ ಕಾರ್ಯದರ್ಶಿ ಹುರುಳಿ ಬಸವರಾಜ್ ಕನ್ನಡನಾಡಿನ ಸಾಹಿತ್ಯ ಲೋಕದ ಬಗ್ಗೆ ಉಪನ್ಯಾಸ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‍ಕೆ.ಮಲ್ಲಿಕಾರ್ಜುನ್, ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.
ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆ, ರೈತಗೀತೆ, ಹುಯಿಲುಗೋಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ದ.ರಾ.ಬೇಂದ್ರೆ ಬರೆದ ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ, ಬಂಕಿಮಚಂದ್ರ ಚಟರ್ಜಿ ವಿರಚಿತ ವಂದೇಮಾತರಂ, ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರರ ರಾಷ್ಟ್ರಗೀತೆ ಮುಂತಾದ ಗೀತೆಗಳನ್ನು ಧ್ವನಿಮುದ್ರಿಕೆಗಳ ಸಂಗೀತ ಸಂಯೋಜನೆಯಲ್ಲಿ ರಾಗಬದ್ಧವಾಗಿ ತರಬೇತಿ ನೀಡಲಾಗುವುದು ಎಂದು ರಂಗಸೌರಭ ಕಲಾ ಸಂಘದ ನಿರ್ದೇಶಕ ಕೆ. ದಯಾನಂದ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.