ಬೆಂಗಳೂರು; ಪ್ರತಿ ಲೀಟರ್ ಗೆ 5 ರೂಪಾಯಿ ಏರಿಕೆ ಮಾಡಬೇಕೆಂಬ ಹಾಲು ಒಕ್ಕೂಟದ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸೊಪ್ಪು ಹಾಕಿಲ್ಲ. ಇಂದು ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿಲ್ಲ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಒಕ್ಕೂಟದ ಬೇಡಿಕೆಗಳನ್ನು ಆಲಿಸಿ, ಹಾಲಿನ ಬೆಲೆಯೇರಿಕೆಯ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ದರ ಏರಿಕೆ ಮಾಡಬೇಕು ಎಂಬ ಒತ್ತಾಯವಿದೆ ಆದರೆ ದರ ಹೆಚ್ಚಳ ಮಾಡಿದರೆ ಮೊತ್ತವು ಸಂಪೂರ್ಣವಾಗಿ ರೈತರಿಗೆ ಮಾತ್ರವೇ ವರ್ಗಾವಣೆಯಾಗಬೇಕು ಎಂಬುದು ಸರ್ಕಾರದ ದೃಢ ನಿಲುವು.

ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆಯನ್ನು ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ.

ಮುಂದಿನ ಮೂರು ತಿಂಗಳಲ್ಲಿ ಆಡಳಿತಾತ್ಮಕ ವೆಚ್ಚವನ್ನು 2.5% ಕಡ್ಡಾಯವಾಗಿ ಇಳಿಸಬೇಕು. ಅಲ್ಲಿಂದ ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲಾ ಒಕ್ಕೂಟಗಳು ಆಡಳಿತಾತ್ಮಕ ವೆಚ್ಚವನ್ನು ಶೇ.2ಕ್ಕಿಂತ ಕೆಳಗೆ ಇಳಿಸಲೇಬೇಕು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ ಎನ್ನುವುದು ನಿಜ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎಂಬುವುದು ನಮ್ಮ ಸರ್ಕಾರದ ನಿಲುವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

