ಬೆಳಗಾವಿ: ಹಾಲಿನ ದರವನ್ನು ಮತ್ತೆ ಹೆಚ್ಚಳ ಮಾಡುವ ಯೋಜನೆ ಸಿದ್ಧವಾಗಿದೆ. ಒಂದು ಕಡೆ ಕೆಎಂಎಫ್ ದರ ಹೆಚ್ಚಳ ಮಾಡುವುದು, ಅದರ ಜೊತೆಗೆ ಅಂಗಡಿಯವರು ಅದರ ಮೇಲೂ ಒಂದು ರೂಪಾಯಿ ದರವನ್ನು ಫ್ರೀಜರ್ ನೆಪದಲ್ಲಿ ತೆಗೆದುಕೊಳ್ಳುತ್ತಾರೆ. ಇದರ ಹೊರೆ ಗ್ರಾಹಕರ ಮೇಲೆಯೇ ಹೆಚ್ಚಾಗುತ್ತಿದೆ. ಈ ನಡುವೆ ಮತ್ತೆ ಮೂರು ರೂಪಾಯಿ ದರ ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಆದರೆ ಈ ಬಾರಿ ಹೆಚ್ಚಳವಾದ ಹಣ ನೇರವಾಗಿ ರೈತರಿಗೆ ತಲುಪಲಿದೆ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಪ್ರತಿ ಲೀಟರ್ ಗೆ ಕನಿಷ್ಠ ಮೂರು ರೂಪಾಯಿ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಿ, ಮೂರು ರೂಪಾಯಿ ದರ ಏರಿಕೆ ಮಾಡಲಾಗುತ್ತದೆ. ಅಲ್ಲದೆ ನಂದಿನಿ ಹಾಲಿನ ದರ ಪರಿಷ್ಕರಣೆಯ ಸಂಪೂರ್ಣ ದರ ರೈತರಿಗೆ ಸಂದಾಯವಾಗಲಿದೆ. 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ಗೆ ಹಾಲಿನ ದರ ಪರಿಷ್ಕರಣೆ ಮಾಡುವಂತೆ ಪ್ರಸ್ತಾವ ಸಲ್ಲಿಸಿವೆ ಎಂದಿದ್ದಾರೆ.