ಈಗಾಗಲೇ ನಂದಿನಿ ಹಾಲಿನ ದರ ಒಂದೇ ಸಮನೆ ಏರಿಕೆಯಾಗಿದೆ. ಈಗ ಮತ್ತೆ ಹಾಲಿನ ದರವನ್ನು ಏರಿಕೆ ಮಾಡುವ ಪ್ಲ್ಯಾನ್ ಇದೆ ಎಂದು ಶಾಸಕ ಕೆ.ವೈ. ನಂಜೇಗೌಡ ಅವರು ಸುಳಿವು ನೀಡಿದ್ದಾರೆ. ನಂಜೇಗೌಡ ಅವರು ಕೋಲಾರ ಹಾಲು ಒಲ್ಕೂಟದ ಅಧ್ಯಕ್ಷರು ಕೂಡ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ನಂಜೇಗೌಡ ಅವರು, ಶೀಘ್ರದಲ್ಲಿಯೇ ನಂದಿನಿ ಹಾಲಿನ ದರವನ್ನು ಏರಿಸಲಾಗುವುದು. ಐದು ರೂಪಾಯಿ ಏರಿಕೆ ಮಾಡಲು ಯೋಜನೆ ನಡೆದಿದ್ದು, ಆ ಹಣವನ್ನು ನೇರವಾಗಿ ರೈತರಿಗೆ ನೀಡಬೇಕೆಂದು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ನಂದಿನಿ ಹಾಲಿನಿ ದರ ಹೆಚ್ಚಿಸುವ ಬಗ್ಗೆ ಕೆಲವು ದಿನಗಳ ಹಿಂದಿನಿಂದಲೇ ಚರ್ಚೆ ನಡೆಯುತ್ತಿದೆ. ಬೆಳಗಾವಿ ಅಧಿವೇಶನದ ಬಳಿಕ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನುವ ಮಾತುಗಳು ಈಗಾಗಲೇ ಜೋರಾಗಿ ಕೇಳಿಬರುತ್ತಿವೆ. ಇದರಿಂದ ಗ್ರಾಹಕರಿಗೆ ದೊಡ್ಡ ಹೊಡೆತ ಬಿದ್ದಂತೆ ಆಗುತ್ತದೆ. ಮೊದಲೇ ರಾಜ್ಯದಲ್ಲಿ ವಿಪರೀತ ಮಳೆಯಿಂದಾಗಿ ಸಾಕಷ್ಟು ಬೆಳೆ ನಷ್ಟವಾಗಿ, ತರಕಾರಿ, ಕಾಳುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆ ಹೀಗೆ ಹಾಲಿನ ದರವೂ ಏರಿಕೆಯಾದರೆ ಜನಸಾಮಾನ್ಯರ ಕಥೆ ಏನು..?
ಪೆಟ್ರೋಲ್, ಡಿಸೇಲ್, ಎಣ್ಣೆ, ಕಾಳು ಕಡಿ, ಚಿನ್ನ ಬೆಳ್ಳಿಯೂ ಸಮಾಧಾನಕರವಾದ ಬೆಲೆಗೆ ಇಳಿಯುತ್ತಿಲ್ಲ. ಒಂದೇ ಸಮನೇ ಏರಿಕೆಯಾಗುತ್ತಲೆ ಇರುವ ಮಧ್ಯಮವರ್ಗದ ಜನರ ಪರಿಸ್ಥಿತಿ ಹೇಳುವಂತೆ ಇಲ್ಲ. ದುಡಿದ ಹಣವೆಲ್ಲ ಬರೀ ಲೈಫ್ ಲೀಡ್ ಮಾಡುವುದಕ್ಕೇನೆ ಕಳೆದೋಗುತ್ತಿದೆ. ಮುಂದಿನ ಜೀವನಕ್ಕೆ ಉಳಿಸುವುದಕ್ಕೂ ಕಷ್ಟ ಎಂದು ಬೇಸರ ಹೊರ ಹಾಕುತ್ತಿದ್ದಾರೆ. ಅದರಲ್ಲೂ ಐದು ರೂಪಾಯಿ ಏರಿಕೆ ಮಾಡಿದರೆ ಮಧ್ಯಮ ವರ್ಗದವರಿಗೆ ಹೊರೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.