ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದಷ್ಟೇ ನಂದಿನಿ ಬ್ರಾಂಡ್ ನಲ್ಲಿ ದೋಸೆ, ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಕೆಎಂಎಫ್ ಘೋಷಣೆ ಮಾಡಿತ್ತು. ಅದರ ಸಿದ್ಧತೆ ಕೂಡ ನಡೆದಿತ್ತು. ಆದರೆ ಇದೀಗ ದಿಢೀರೆಂದು ಆ ನಿರ್ಧಾರದಿಂದ ಹೊರಗೆ ಬಂದಿದೆ. ನಂದಿನಿ ಬ್ರಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ತರದೆ ಇರಲು ಕೆಎಂಎಫ್ ನಿರ್ಧಾರ ಮಾಡಿದೆ.
ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿರುವ ಮಾಹಿತಿ ಪ್ರಕಾರ, ದೋಸೆ ಹಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳದೆ ಇದ್ದರೆ ನಂದಿನಿ ಬ್ರ್ಯಾಂಡ್ ಗೆ ಕೆಟ್ಟ ಹೆಸರು ಬರುತ್ತದೆ. ಇದು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ವಹಿವಾಡಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿಯೇ ನಂದಿನಿ ಬ್ರಾಂಡ್ ದೋಸೆ ಇಟ್ಟನ್ನು ಬಿಡುಗಡೆ ಮಾಡದೆ ಇರಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ನಂದಿನಿ ಬ್ರಾಂಡ್ ದೆಹಲಿಯನ್ನು ತಲುಪಿದ್ದು, ವ್ಯಾಪಾರ ವಹಿವಾಟಿಗೆ ಉತ್ತಮ ರೆಸ್ಪಾನ್ಸ್ ಬರ್ತಿದೆ. ಆದರೆ ಇದರ ನಡುವೆ ಬೇರೆ ಹಾಲಿನ ಬ್ರ್ಯಾಂಡ್ ಗಳು ಅದಕ್ಕೆ ಅಡ್ಡಗಾಲು ಹಾಕಿವೆ. ರಾಜ್ಯದಲ್ಲಿ ಹಾಲಿನ ಸಂಗ್ರಹಣೆ ಪ್ರಮಾಣ ಕೋಟಿ ಲೀಟರ್ ಗೂ ಹೆಚ್ಚು ಗಡಿ ದಾಟಿದೆ. ಈ ಕಾರಣದಿಂದಾನೇ ಕೆಎಂಎಫ್ ಮಾರುಕಟ್ಟೆಯನ್ನು ವಿಸ್ತಾರ ಮಾಡುವತ್ತ ಹೆಜ್ಜೆ ಇಟ್ಟಿದೆ. ಮಂಡ್ಯ ಒಕ್ಕೂಟದಿಂದ ಹೊಸದಿಲ್ಲಿ, ಹರಿಯಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಆರಂಭಿಕವಾಗಿ ಟ್ಯಾಂಕರ್ ಗಳ ಮೂಲಕ 2.50 ಲಕ್ಷ ಲೀಟರ್ ಹಾಲನ್ನು ಕಳುಹಿಸಿಕೊಡಲಾಗುತ್ತಿದೆ. ನಂದಿನಿ ಹಾಲನ್ನು ಪ್ಯಾಕ್ ಮಾಡಿ ಸ್ಥಳೀಯ ಮಾರಾಟಗಾರರಿಂದ ಮಾರಾಟ ಮಾಡಿಸಲಾಗುತ್ತದೆ.