ನಮ್ಮೂರ ದೇಗುಲ : ಚಿತ್ರದುರ್ಗದ ಏಕನಾಥೇಶ್ವರಿ ದೇವಾಲಯ ಮಾಹಿತಿ…!

2 Min Read

ವಿಶೇಷ ಲೇಖನ
ಡಾ.ಕೆ.ವಿ.ಸಂತೋಷ್, ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ, ಮೊ : 9342466936

ಸುದ್ದಿಒನ್ : ಚಿತ್ರದುರ್ಗದ ಅತ್ಯಂತ ಪ್ರಾಚೀನ ಹಾಗೂ ಪ್ರಮುಖ ದೇವಾಲಯಗಳಲ್ಲಿ ಒಂದಾದ ಏಕನಾಥೇಶ್ವರಿ ದೇವಾಲಯವು ನವದುರ್ಗೆಯರಲ್ಲಿ ಒಂದಾಗಿದೆ.
ಚಿತ್ರದುರ್ಗದ ಯಾವುದೇ ಪ್ರಮುಖ ಜಾತ್ರೆ,ಹಬ್ಬ ಸಮಾರಂಭಗಳು, ಪ್ರಾರಂಭವಾಗುವುದು ಈ ದೇವರ ಸನ್ನಿಧಾನದಿಂದಲೇ.ದಕ್ಷಿಣಾಭಿಮುಖವಾಗಿ ವಿಜಯನಗರ ಶೈಲಿಯಲ್ಲಿ 14ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯವು ಚಿತ್ರದುರ್ಗದ ಬೆಟ್ಟದ ಮೇಲೆ ಇರುವ ದೇವಾಲಯವಾಗಿದೆ.

ಬೃಹತ್ತಾದ ಬಂಡೆಗಲ್ಲಿನ ಕೆಳಭಾಗದ ವಿಶಾಲವಾದ ಗುಹೆಯಲ್ಲಿ ಗರ್ಭಗೃಹ,ಸಭಾಮಂಟಪಗಳು ಹಾಗೂ ಮುಂಭಾಗದಲ್ಲಿ ಪಾಳೆಗಾರರ ಕಾಲದಲ್ಲಿ ಕಟ್ಟಲಾದ ಮುಖಮಂಟಪ, ದೀಪಸ್ಥಂಭ,ಉಯ್ಯಾಲೆ ಕಂಬಗಳುಳ್ಳ ದೇವಾಲಯ ಇದಾಗಿದೆ.
ಗರ್ಭಗೃಹದಲ್ಲಿ ಬೃಹತ್ ಬಂಡೆಗಲ್ಲಿನ ಮೇಲೆ ಏಕನಾಥೇಶ್ವರಿ ದೇವಿಯ ತಲೆ ಮತ್ತು ಎದೆ ವರೆಗಿನ ಭುಜಗಳುಳ್ಳ ಉಬ್ಬುಶಿಲ್ಪವನ್ನು ಕಡೆಯಲಾಗಿದೆ. ಜಟಾ ಮುಕುಟಧಾರಿಯಾದ ದೇವತೆಯ ತಲೆಯ ಮೇಲೆ ಏಳುಹೆಡೆಯ ಸರ್ಪವಿದೆ. ಗರ್ಭಗೃಹದಲ್ಲಿ ಚೌಡಮ್ಮ, ಬರಗೆರಮ್ಮ,ತಿಪ್ಪಿನಘಟ್ಟಮ್ಮ ಎಂದು ಕರೆಯಲಾಗುವ ಮೂರ್ತಿ ಶಿಲ್ಪಗಳಿವೆ.‌ ಸಭಾಮಂಟಪದಲ್ಲಿ ತ್ರಿಶೂಲ, ಖಡ್ಗ, ಡಮರುಗ,ಶಿರವಿಡಿದು ನಿಂತ ಭೈರವನ ಶಿಲ್ಪಗಳಿವೆ.
ಮುಖ ಮಂಟಪದಲ್ಲಿ ನಾಗಶಿಲ್ಪಗಳಿವೆ.ಬಂಡೆಯಲ್ಲಿ ಕತ್ತಿ ಮತ್ತು ಬಾಕುಗಳನ್ನು ಹಿಡಿದ ಯೋಧನ ಕೆತ್ತನೆ ಇದೆ.

 

ದೇವಾಲಯದ ಕಣಶಿಲೆಯ ಕಂಬಗಳು ಚಚ್ಚೌಕ ಮತ್ತು ಅಷ್ಟ ಮುಖಗಳಲ್ಲಿ ಇವೆ. ಗುಹಾಲಯದ ಗರ್ಭಗೃಹ ಮತ್ತು ಮೂಲ ಶಿಲ್ಪಗಳು ಪ್ರಾಚೀನವಾಗಿದ್ದರೆ, ಮುಖಮಂಟಪ ಮೊದಲಾದ ಭಾಗಗಳು ಪಾಳೆಗಾರರ ಕಾಲದಲ್ಲಿ ಸೇರ್ಪಡೆ ಆಗಿರುವುದನ್ನು ಕಾಣಬಹುದು. ದೇವಾಲಯದ ಮುಂಭಾಗದಲ್ಲಿ ಸುಮಾರು 40 ಅಡಿ ಎತ್ತರದ ದೀಪ ಸ್ತಂಭ ಹಾಗೂ ಉಯ್ಯಾಲೆ ಕಂಬಗಳಿವೆ. ದೇವಾಲಯದ ಮುಖಮಂಟಪದ ಮೇಲೆ ಹಾರದ ರಚನೆಯ ಕೈಪಿಡಿ ಗೋಡೆ ಇದ್ದು ಅದರಲ್ಲಿ ಅನೇಕ ಬಗೆಯ ಗಾರೆಗಚ್ಚಿನ ಮೂರ್ತಿಗಳಿವೆ.

 

ಚಿತ್ರದುರ್ಗದ ಪ್ರಸಿದ್ಧ ದೇವತೆಗಳಲ್ಲಿ ಒಂದಾದ ಏಕನಾಥೇಶ್ವರ ಜಾತ್ರೆಯು ಯುಗಾದಿ ಹಬ್ಬವಾದ 15 ದಿನಗಳ ಬಳಿಕ ಸಾಮಾನ್ಯವಾಗಿ ಶನಿವಾರದಂದು ಜರುಗುತ್ತದೆ.
ಇಡೀ ನಗರದ ತುಂಬೆಲ್ಲ ದೇವಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಪೂಜಿಸಲಾಗುತ್ತದೆ.
ಜಾತ್ರೆಯ ಸಮಯದಲ್ಲಿ ಹತ್ತಾರು ಧಾರ್ಮಿಕ ಆಚರಣೆಗಳ ಜೊತೆಗೆ ಹೂವಿನ ಪೂಜೆ, ಕಾರ್ತಿಕೋತ್ಸವ,ಉಯ್ಯಾಲೆ ಉತ್ಸವ,ದೀಪೋತ್ಸವ… ವಿಜೃಂಭಣೆಯಿಂದ ಸಾವಿರಾರು ಜನರ ನಡುವೆ ಜರುಗುತ್ತದೆ. ಸಿಡಿ ಉತ್ಸವ ಅತ್ಯಂತ ಪ್ರಸಿದ್ಧವಾದ ಆಚರಣೆಯಾಗಿದ್ದು ಈ ದೇವರ ಪಾದಗಟ್ಟೆಯು ಕೋಟೆಯ ಕೆಳಭಾಗದಲ್ಲಿದ್ದು ಅಲ್ಲಿ ನೆರವೇರಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks