ನಮ್ಮೂರ ದೇಗುಲ : ಚಿತ್ರದುರ್ಗ : ಕೋಟೆಯ ಶ್ರೀ ಹಿಡಿಂಬೇಶ್ವರ ದೇವಾಲಯದ ಪರಿಚಯ

3 Min Read

ವಿಶೇಷ ಲೇಖನ
ಡಾ..ಕೆ.ವಿ.ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಚಿತ್ರದುರ್ಗ ಕೋಟೆಯಲ್ಲಿನ ಮೇಲುದುರ್ಗದಲ್ಲಿರುವ ಗುಹಾಂತರ ದೇವಾಲಯಗಳಲ್ಲಿ ಹಾಗೂ ಅತ್ಯಂತ ಸುಂದರ ತಾಣಗಳಲ್ಲಿ ಪ್ರಮುಖವಾದುದಾಗಿದೆ. ದೇವಾಲಯವು ಪ್ರಾಚೀನ ಹಾಗೂ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ದೇವಾಲಯಗಳಲ್ಲಿ ಒಂದಾಗಿದೆ. ಕೋಟೆಯ ಏಕನಾಥೇಶ್ವರಿ ದ್ವಾರವನ್ನು ದಾಟಿ ಮುಂದೆ ಎಡಭಾಗದಲ್ಲಿ ಗಾಳಿ ಮಂಟಪದ ಕಡೆಗೆ ಹೋದರೆ ಈ ದೇವಾಲಯ ಸಿಗುತ್ತದೆ.

ಹಿಂದಿನಿಂದಲೂ ಇಂದಿನವರೆಗೂ ಅತ್ಯಂತ ಹೆಚ್ಚು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಇದನ್ನು ಕ್ರಿಸ್ತಶಕ 10 -11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಿಸಲಾಗಿದೆ.

ಹಿಡಿಂಬೇಶ್ವರನನ್ನು ಹಿಡಿಂಬನಾಥ,ಹಿಡುಬಯ್ಯ ಕಪ್ಪನೆಯ ನಯವಾದ ಶಿವಲಿಂಗ ಇದಾಗಿರುವುದರಿಂದ ಕರಿಯ ಇಡುಬಯ್ಯ ಎಂದೂ,ಇಲ್ಲಿನ ಸ್ಥಾನಿಕರನ್ನು ಇಡುಬಜಿಯ ಎಂದು ಕರೆಯಲಾಗಿದೆ. ಬಹು ಎತ್ತರದ ಹಾಗೂ ನೂರಾರು ಮೀಟರ್ ಗಳಷ್ಟು ಉದ್ದವಾದ ಕಣಶಿಲೆಯ ಏಕಶಿಲಾ ಬಂಡೆಗಲ್ಲಿನ ಬೆಟ್ಟವನ್ನು ದೇವಾಲಯ ಕಟ್ಟಲು ಬಳಸಿರುವುದು ಗಮನಾರ್ಹ. 1073ರ ಹುಲಿಗೊಂದಿ ಸಿದ್ದೇಶ್ವರ ದೇವಾಲಯದ ಬಳಿಯ ಶಾಸನದಲ್ಲಿ ಹಿಡಿಂಬೇಶ್ವರ ದೇವಾಲಯದ ಉಲ್ಲೇಖವಿದೆ.ಇದರಿಂದ ಈ ದೇವಾಲಯವು 1073 ಕ್ಕೂ ಪೂರ್ವದಲ್ಲಿ ಸ್ಥಾಪನೆಯಾದ ದೇವಾಲಯವಾಗಿದೆ. ಬೃಹತ್ ಬಂಡೆಗಲ್ಲಿನ ಕೆಳಭಾಗದಲ್ಲಿರುವ ಗುಹೆಯನ್ನು ದೇವಾಲಯವಾಗಿ ರೂಪಿಸಿ ಅದರಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
ಈ ಗುಹಾಲಯದ ಮುಂದೆ ನವರಂಗ,ಸಭಾಮಂಟಪ ಹಾಗೂ ಮುಖಮಂಟಪಗಳನ್ನು ನಿರ್ಮಿಸಿ ವಿಸ್ತರಿಸಲಾಗಿದೆ.ಇವುಗಳ ಮುಂದೆ ದ್ವಾರಮಂಟಪ, ಗಾಳಿಮಂಟಪ, ಉಯ್ಯಾಲೆಕಂಬ, ದೀಪಸ್ತಂಭಗಳಿವೆ.

ಗರ್ಭಗೃಹದಲ್ಲಿ ಒಂದೂವರೆ ಅಡಿ ಎತ್ತರದ ಪಾಣಿಪೀಠದ ಮೇಲೆ ಮುಕ್ಕಾಲು ಅಡಿ ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಿರುವರು. ನವರಂಗದಲ್ಲಿ ನಂದಿಯ ಶಿಲ್ಪವಿದೆ. ಇದು ಎರಡು ಅಡಿ ಎತ್ತರ, ಮೂರು ಅಡಿ ಉದ್ದವಾಗಿದ್ದು, ವಿವಿಧ ಅಲಂಕರಣೆಗಳನ್ನು ಒಳಗೊಂಡಿದೆ.
ನವರಂಗದಲ್ಲಿ ನಾಲ್ಕು ಕಂಬಗಳಿದ್ದು,ಇವುಗಳನ್ನು 8 ಮತ್ತು 16 ಮುಖಗಳಲ್ಲಿ ಕಡೆದಿರುವರು. ನವರಂಗದಲ್ಲಿ ಅನೇಕ ಶಿಲ್ಪಗಳಿದ್ದು,ಅವುಗಳಲ್ಲಿ ಕಪಾಲಶಿವ,ಗಣೇಶ, ರಾಹುಕೇತು, ಕಾಲಭೈರವ, ಮಹಿಷಮರ್ದಿನಿ ಮುಖ್ಯವಾಗಿದೆ.
ಸಭಾಮಂಟಪದಲ್ಲಿ ನಾಲ್ಕು ಕಂಬಗಳಿದ್ದು,ಅವು 4-8-16 ಮುಖಗಳಲ್ಲಿವೆ. ದೇಗುಲದ ಗರ್ಭಗೃಹ,ನವರಂಗಗಳ ಬಾಗಿಲುವಾಡಗಳು ಸರಳವಾಗಿವೆ. ಸಭಾ ಮಂಟಪಕ್ಕೆ ಮೂರು ಬಾಗಿಲುಗಳಿವೆ. ದಕ್ಷಿಣಾಭಿಮುಖವಾಗಿರುವ ಮುಖ್ಯ ಬಾಗಿಲುವಾಡದಲ್ಲಿ ಪೂರ್ಣಕುಂಭಗಳಿದ್ದು, ಲಲಾಟದ ಉತ್ತರಾಂಗದಲ್ಲಿ ಮುಂಚಾಚಿದ ರಚನೆಗಳಿವೆ.
ಇತರ ದ್ವಾರಗಳ ಬಾಗಿಲುವಾಡಗಳು ಸರಳವಾಗಿವೆ. ಮುಖಮಂಟಪದಲ್ಲಿ ಎರಡು ಕಂಬಗಳನ್ನು ಒಳಗೊಂಡಂತೆ ಕಕ್ಷಾಸನವನ್ನು ನಿರ್ಮಿಸಿರುವರು. ಗರ್ಭಗೃಹದಲ್ಲಿರುವ ಬೃಹತ್ ಬಂಡೆಗಲ್ಲಿನ ಮೇಲ್ಭಾಗದಲ್ಲಿ ಚಿಕ್ಕದಾದ ಶಿಖರವನ್ನು ನಿರ್ಮಿಸಲಾಗಿದೆ. ದೇವಾಲಯದ ನವರಂಗ ಮತ್ತು ಸಭಾಮಂಟಪಗಳ ಮೇಲೆ ಕೈಪಿಡಿ ಗೋಡೆ ಇದೆ. ಇದರಲ್ಲಿ ಯಾವುದೇ ಮೂರ್ತಿಗಳಿರುವುದಿಲ್ಲ. ದೇವಾಲಯದ ಸಭಾಮಂಟಪದಲ್ಲಿ 2 ಶಿಲಾಶಾಸನಗಳಿವೆ.
ಒಂದು ಶಾಸನವು ಕಲ್ಯಾಣ ಚಾಲುಕ್ಯರ ಜಗದೇಕಮಲ್ಲನ ಕಾಲದ್ದಾಗಿದೆ. ಇದರಲ್ಲಿ ಅವನ ಸಾಮಂತನಾದ ವಿಜಯಪಾಂಡ್ಯನು ಈ ಪ್ರದೇಶವನ್ನು ಆಳುತ್ತಿರುವಾಗ ಉದಯಾದಿತ್ಯನಾಯಕನು ಬೆಂಮತ್ತನೂರನ್ನು ಆಳುತ್ತಿದ್ದನು. ಉದಯಾದಿತ್ಯ ನಾಯಕನ ಮಗನಾದ ಮಾಚದೇವನು ಕಾಮಯ್ಯನಾಯಕ, ಚೋಳಯ್ಯನಾಯಕ ಮೊದಲಾದವರೊಂದಿಗೆ ಕ್ರಿಸ್ತಶಕ 1183 ರಲ್ಲಿ ಹಿಡಿಂಬೇಶ್ವರ ದೇವರ ನಂದಾದೀವಿಗೆ,ನೈವೇದ್ಯ ಚೈತ್ರಪವಿತ್ರ ಕಾರ್ಯಗಳಿಗೆ ಭೂಮಿಯನ್ನು ದಾನ ಮಾಡಿದ ತಿಳಿದುಬರುತ್ತದೆ. ಹಿಡಿಂಬಾ ವನದ ಉಲ್ಲೇಖವೂ ಈ ಶಾಸನದಲ್ಲಿದೆ.
ಕ್ರಿಸ್ತಶಕ 1286 ರ ಮತ್ತೊಂದು ಶಾಸನವು ಹೊಯ್ಸಳ ವೀರನರಸಿಂಹನ ಕಾಲದ್ದಾಗಿದೆ. ಈ ಅವಧಿಯಲ್ಲಿ ಮಹಾಪ್ರಧಾನನಾಗಿದ್ದ ಪೆರುಮಾಳೆದೇವ ದಣ್ಣಾಯಕನು ಹಿಡಿಂಬೇಶ್ವರ ದೇವರ ಅಮೃತಪಡಿಗೆ ದಾನದತ್ತಿಯನ್ನು ನೀಡಿದ ವಿವರಣೆ ಇದೆ. ಈ ಶಾಸನದಲ್ಲಿ ಬೆಟ್ಟದ ಮೇಲೆ ತನ್ನ ಹೆಸರಿನಲ್ಲಿ ಪೆರುಮಾಳೆಪುರವನ್ನು ನಿರ್ಮಿಸುದುದಾಗಿಯೂ, ಕುರುಬರ ಕಾಳೆಯನ ಕೆರೆಯನ್ನು ಕ್ರಯಕ್ಕೆ ಪಡೆದು ಅದನ್ನು ಜೀರ್ಣೋದ್ದಾರ ಮಾಡಿ ಪೆರುಮಾಳೆಸಮುದ್ರವೆಂದು ಕರೆದನೆಂದು ಹೇಳುತ್ತದೆ. ಹಾಗೆ ಅನೇಕ ದೇವಾಲಯಗಳು ಅಂದು ಅಸ್ತಿತ್ವದಲ್ಲಿ ಇದ್ದುದನ್ನು ಸ್ಪಷ್ಟಪಡಿಸುತ್ತದೆ.
ಕ್ರಿಸ್ತಶಕ 1411 ಕ್ಕೆ ಸೇರಿದ ಇನ್ನೊಂದು ಶಿಲಾಶಾಸನವು ವಿಜಯನಗರದ ಅರಸ ಒಂದನೇ ದೇವರಾಯನ ಕಾಲದ್ದಾಗಿದೆ.

ದೇವರಾಯನ ಮಗನಾದ ವೀರಮಲ್ಲಣ್ಣ ಒಡೆಯನು ಹಿಡಿಂಬನಾಥ ದೇವರಿಗೆ ವ್ಯಯ ಸಂವತ್ಸರದ ಕಾರ್ತಿಕ ಶುದ್ಧ 15ರ ಪುಣ್ಯಕಾಲದಲ್ಲಿ ಮಹಾಪೂಜೆ, ನೈವೇದ್ಯ, ಶಿಖರದೀಪ್ತಿ ಎನ್ನು ಮಾಡಿ ನಮ್ಮ ತಾಯಿ ಮಲ್ಲವ್ವೆಗೆ ಪರದಲ್ಲಿ ಪುಣ್ಯವಾಗಲೆಂದು ಹಾಗೂ ಅವಳ ಹೆಸರಿನಲ್ಲಿ ಚಿಮ್ಮತ್ತನಕಲ್ಲು ಪಟ್ಟಣಕ್ಕೆ ಪೂರ್ವದ ಹಳ್ಳಿಗಳಲ್ಲಿ ಒಂದಾದ ಕುಂಚಿಗನಹಳ್ಳಿಯನ್ನು ಮಲ್ಲಾಪುರ ಎಂದು ಕರೆದು ಹಿಡಿಂಬನಾಥ ದೇವರಿಗೆ ದಾನ ಬಿಟ್ಟನೆಂದು ಹೇಳುತ್ತದೆ.
ದೇವಾಲಯದ ದಕ್ಷಿಣದ ದ್ವಾರದ ಕಲುವೆಸನ ಗೋಪುರವನ್ನು ಕಟ್ಟಿಸಿದನೆಂದು ಹೇಳುತ್ತದೆ. ಈ ಶಾಸನದಿಂದ ಒಂದನೆಯ ದೇವರಾಯನ ರಾಣಿ ಮಲ್ಲವ್ವೆ ಎಂಬುದು ಕ್ರಿಸ್ತಶಕ 1411 ರ ಹೊತ್ತಿಗೆ ಅವಳು ತೀರಿಕೊಂಡಿದ್ದು ಶಾಸನದಲ್ಲಿ ವ್ಯಕ್ತವಾದ ಪರದಲ್ಲಿ ಸುಕೃತವಾಗಬೇಕೆಂದು ಎಂಬ ಹೇಳಿಕೆಯು ದೃಢಪಡಿಸುತ್ತದೆ.

ಮಾಹಿತಿ: ಎಸ್. ವೈ.ಸೋಮಶೇಖರ್ ಹಂಪಿ ವಿವಿ. Somashekhar S Y

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks