ಚಳ್ಳಕೆರೆಯ ನಾಡೋಜ ಪುರಸ್ಕೃತ ಸಿರಿಯಮ್ಮ ನವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

1 Min Read

 

ಸುದ್ದಿಒನ್,  ಚಿತ್ರದುರ್ಗ, ನವೆಂಬರ್. 05  : ಚಳ್ಳಕೆರೆಯ ನಾಡೋಜ ಪುರಸ್ಕೃತ ಸಿರಿಯಮ್ಮಗೆ 2023ನೇ ಸಾಲಿನ “ಜಾನಪದ ಅಕಾಡೆಮಿ ಪ್ರಶಸ್ತಿ” ಲಭಿಸಿದೆ. ಈ ಪ್ರಶಸ್ತಿಯಿಂದ ಕಾಡುಗೊಲ್ಲ ಸಮುದಾಯ ಸಂತಸಗೊಂಡಿದೆ. ಸಿರಿಯಮ್ಮ ಅವರು ಈ ಸಮುದಾಯದಲ್ಲಿ ಜಾನಪದ ಕಣಜ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಸಿರಿಯಮ್ಮ ಅನಕ್ಷರಸ್ಥರಾದರು ಜಾನಪದ ಹಾಡುಗಳನ್ನು ಪೋಣಿಸುವುದಲ್ಲಿ ಎತ್ತಿದ ಕೈ. ಹಿರಿಯ ಕಲಾವಿದೆ ಸಿರಿಯಮ್ಮ ಸಾವಿರಾರು ಪದಗಳನ್ನು ತನ್ನ ಜ್ಞಾನ ಭಂಡಾರದಲ್ಲಿಟ್ಟುಕ್ಕೊಂಡಿದ್ದಾರೆ. ಸಮುದಾಯ ಜಾನಪದ ಹಿರಿಯ ಸೋಬಾನೆ ಕಲಾವಿದೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಸಮುದಾಯದ ಚಿಂತಕರು, ಸಾಹಿತಿಗಳು, ಕಲಾವಿದರು, ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ಸಿರಿಯಮ್ಮ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎಲಗಟ್ಟೆ ಗ್ರಾಮದವರು. ಸದ್ಯ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಮುದಾಯದ ಸಾಂಸ್ಕೃತಿಕ ವೀರ ನಾಯಕರಾದ ಎತ್ತಪ್ಪ, ಜುಂಜಪ್ಪ, ಚಿಕ್ಕಣ್ಣ, ಕ್ಯಾತಪ್ಪ, ಕದರಿ ನರಸಿಂಹ ಹಾಗೂ ರಂಗಪ್ಪನ ರಂಗಪ್ಪನ ಮಹಾಕಾವ್ಯಗಳನ್ನು ಪಟಪಟನೇ ಉರುಳಿ ಕಾಳು ಸಿಡಿದಂತೆ ಹಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಅಜ್ಜಿ ಮತ್ತು ತಾಯಿಯಿಂದ ಕಲಿತುಕೊಂಡು ಚಿಕ್ಕಂದಿನಿಂದಲೂ ಹಾಡುವುದನ್ನು ಆರಂಬಿಸಿದರು. ಅಷ್ಟೇ ಅಲ್ಲ ಈಗಿನ ಕಾಡುಗೊಲ್ಲರ ಹೆಣ್ಣು ಮಕ್ಕಳಿಗೆ ಹಾಡುಗಳನ್ನು ಕಲಿಸುವ ಮೂಲಕ ಜಾನಪದವನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಾನಪದ ಕಲೆಯ ಉಳಿವಿಗಾಗಿ ನಿರಂತರವಾಗಿ ಪ್ರಯತ್ನ ಪಡುತ್ತಿರುವ ಸಿರಿಯಮ್ಮರಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಕುರಿತು ಸಿರಿಯಮ್ಮ ಹೇಳಿದ್ದು ಹೀಗೆ,

‘ಅನಕ್ಷರಸ್ಥೆಯಾದ ನನಗೆ ಪ್ರಶಸ್ತಿ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ವಯಸ್ಸು ಆಯಿತು. ಆರೋಗ್ಯ ಸರಿಯಿಲ್ಲ. ನಾನು ಕಲಿತಿರುವ ಪದಗಳನ್ನು ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳಿಗೆ ಕಲಿಸೋಣ ಅಂದ್ರೆ ಈಗಿನ ಹೆಣ್ಣು ಮಕ್ಕಳು ಕಲಿಯುವ ಹಾಡುಗಳ ಕಡೆ ಆಸಕ್ತಿ ತೋರುತ್ತಿಲ್ಲ. ಪ್ರಶಸ್ತಿಗೆ ನನ್ನನ್ನು ಗುರುತಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು”.

Share This Article
Leave a Comment

Leave a Reply

Your email address will not be published. Required fields are marked *