ಮಧುಗಿರಿ: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಸೌಜನ್ಯದಿಂದ ಮಾತನಾಡುವುದನ್ನು ಕಲಿಯಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಎನ್. ಗಂಗಣ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ಕೀಳುಮಟ್ಟದ ಪದ ಬಳಕೆ ಮಾಡಿರುವುದು ಸರಿಯಲ್ಲ. ಕುಮಾರಸ್ವಾಮಿಯವರು ಇದುವರೆಗೂ ಸ್ವತಂತ್ರವಾಗಿ ಪಕ್ಷ ಕಟ್ಟಿ ಅಧಿಕಾರ ಪಡೆದವರಲ್ಲ.
ಬಾಹ್ಯ ಬೆಂಬಲದಿಂದ ಆಡಳಿತ ನಡೆಸಿದ್ದಾರೆ ವಿನಃ ಬಹುಮತ ಪಡೆದು ರಾಜ್ಯದಲ್ಲಿ ಆಡಳಿತ ನಡೆಸಿಲ್ಲ. ಮುಂದಿನ ದಿನಗಳಲ್ಲಾದರೂ ಸ್ವಷ್ಟ ಬಹುಮತ ಗಳಿಸಿ ಅಧಿಕಾರ ಚುಕ್ಕಾಣಿ ಹಿಡಿಯುವುದನ್ನು ಮೊದಲು ಕಲಿತುಕೊಂಡು ಆನಂತರ ಇತರರ ಬಗ್ಗೆ ಮಾತನಾಡಲಿ. ನಮ್ಮ ಸಿದ್ದರಾಮಯ್ಯನವರ ಬಗ್ಗೆ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕನ ಸ್ಥಾನಮಾನದ ಬಗ್ಗೆ ಗೌರವ ಇರಬೇಕು ಎಂದ ಗಂಗಣ್ಣ, ಸಿದ್ದರಾಮಯ್ಯ ಅವರ ಪರವಾಗಿ ಅಹಿಂದ ವರ್ಗವಿದೆ. ಅವರನ್ನು ಮತ್ತೊಮ್ಮೆ ಹೀಗೆ ಹೀಯಾಳಿಸಿ ಮಾತನಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಿಂದುಳಿದ ವರ್ಗದವರಿಗೆ ಆಗುತ್ತಿರುವ ನ್ಯಾಯವನ್ನು ಸುಪ್ರೀಂಕೋರ್ಟ್ ಸರಿಪಡಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು. ಇನ್ನು ಸತತ ಬರಗಾಲಕ್ಕೆ ತುತ್ತಾಗಿರುವ ಮಧುಗಿರಿ ತಾಲ್ಲೂಕಿನಲ್ಲಿ ಈ ಬಾರಿಯೂ ಬರಗಾಲ ಮುಂದುವರೆದಿದೆ.
ಸಂಬಂಧಪಟ್ಟ ಅಧಿಕಾರಿಗಳು ಇದರ ಸ್ಪಷ್ಟ ಚಿತ್ರಣವನ್ನು ಸರಕಾರಕ್ಕೆ ಕಳುಹಿಸಿ ರೈತರಿಗೆ ಸಹಕಾರ ನೀಡಬೇಕು. ಎತ್ತಿನ ಹೊಳೆ ಯೋಜನೆ ಮಂದಗತಿಯಲ್ಲಿ ನಡೆಯುತ್ತಿದ್ದು ಅದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.