ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಹಲವು ಸಂಘಟನೆಗಳು ಇಂದು ಮಂಡ್ಯ, ಮೈಸೂರು ಭಾಗದಲ್ಲಿ ಬಂದ್ ಗೆ ಕರೆ ನೀಡಿವೆ. ಆದರೆ ಈ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಬಿಸಿ ಜನ ಸಾಮಾನ್ಯರಿಗೆ ತಟ್ಟಿಯೇ ಇಲ್ಲ. ಮೈಸೂರು ಹಾಗೂ ಮಂಡ್ಯ ಎರಡು ಭಾಗದಲ್ಲೂ ಸಹಜವಾಗಿಯೇ ಜನ ಓಡಾಟ ನಡೆಸಿದ್ದಾರೆ.
ಮೈಸೂರಿನಿಂದ ಬೆಂಗಳೂರು ಸೇರಿದಂತೆ ಎಂದಿನಂತೆಯೇ ಜನ ಓಡಾಟ, ಬಸ್ ಗಳ ಓಡಾಟ ಸಾಗುತ್ತಿದೆ. ಮೈಸೂರಿನ ಭಾಗಕ್ಕೂ ಎಂದಿನಂತೆ ಬಸ್ ಗಳ ಸಂಚಾರವಿದೆ. ಮಂಡ್ಯ ಭಾಗದಲ್ಲಿಯೂ ಜನರು ಪ್ರತಿದಿನದಂತೆ ಈ ದಿನವನ್ನು ಸ್ವಾಗತಿಸಿದ್ದಾರೆ. ಸಾರಿಗೆ ಬಸ್ ಗಳ ಓಡಾಟವೂ ಮುಂದುವರೆದಿದೆ. ವ್ಯಾಪಾರ, ವಹಿವಾಟು ಎಂದಿನಂತೆ ಸಾಗಿದೆ. ವರ್ತಕರು, ಹೊಟೇಲ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಸಂಘಟಕರು ಎಲ್ಲರಿಗೂ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನು ಮುಂಜಾಗ್ರತ ಕ್ರ.ವಾಗಿ ಮಂಡ್ಯ, ಮೈಸೂರು ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಸಿಆರ್ ವ್ಯಾನ್, ಗಸ್ತು ವಾಹನ, ಕಮಾಂಡೋ ವಾಹನವನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕೂಡ ಗಸ್ತು ತಿರುಗುತ್ತಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಅಮಿತ್ ಶಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಬೆಳಗ್ಗೆ 7 ರಿಂದ ಸಂಜೆ 6ರವರೆಗೂ ಬಂದ್ ಗೆ ಕರೆ ನೀಡಲಾಗಿದೆ.