ಮೈಸೂರು: ಲೋಕಸಭಾ ಚುನಾವಣೆಯ ರಂಗು ಈಗಿನಿಂದಾನೇ ಏರುತ್ತಲೆ ಇದೆ. ತಯಾರಿ ಕೂಡ ಜೋರಾಗಿದೆ. ಇದೀಗ ದೇವರಾಜ್ ಅರಸು ಮೊಮ್ಮಗ ಕೂಡ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಮೈಸೂರು – ಕೊಡಗು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇಂದು ದೇವರಾಜ್ ಅರಸು ಅವರ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಹುಣಸೂರಿನ ಕಲ್ಲಳ್ಳಿಗೆ ಸೂರಜ್ ಹೆಗ್ಡೆ ಭೇಟಿ ನೀಡಿದ್ದಾರೆ. ಅರಸು ಸ್ಮಾರಕಕ್ಕೆ ನಮನ ಸಲ್ಲಿಸಿದ್ದಾರೆ. ಸೂರಜ್ ಹೆಗ್ಡೆ ಹಿಂದೆ ಸಾಕಷ್ಟು ಬೆಂಬಲಿಗರು ಬಂದಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯದಲ್ಲಿ ಸಕ್ರೀಯರಾಗಲು ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸೂರಜ್ ಹೆಗ್ಡೆ, ಕಾಂಗ್ರೆಸ್ ನಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಬೇಕು. ನಮ್ಮ ತಾತ ದೇವರಾಜ್ ಅರಸು ಅವರು ಬಡವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಆಶೀರ್ವಾದದಿಂದ ಗೆದ್ದು, ಅವರಂತೆಯೇ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲದಿಂದ ನನಗೆ ಟಿಕೆಟ್ ಸಿಗಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ವಿಶ್ವಾಸ ನನಗಿದೆ ಎಂದು ಸೂರಜ್ ಹೆಗ್ಡೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.