ಮೈಸೂರು: ತಾಯಿ ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳಿಂದ ಅವಸ್ಥೆಯಾಗಿದೆ. ಮೊದಲೇ ಬಿಸಿಲಿಗೆ ಒಣಗಿದ ಬೆಟ್ಟಕ್ಕೆ ಕಿಡಿತಾಕಿಸಿದ್ದಾರೆ. ಇದೀಗ ಆ ಕಿಡಿ ಜೋರಾಗಿಯೇ ಹೊತ್ತಿಕೊಂಡಿದ್ದು, ನಿಯಂತ್ರಣಕ್ಕೆ ಸಿಗದಂತೆ ಹೊತ್ತಿ ಉರಿಯುತ್ತಿದೆ. ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲೆ ಆವರಿಸಿದೆ. ಅಗ್ನಿಶಾಮಕ ದಳದವರು ಬೆಳಗ್ಗೆಯಿಂದಾನೂ ಬೆಂಕಿ ನಂದಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಆದರೂ ನಿಯಂತ್ರಣವಾಗುತ್ತಿಲ್ಲ. ಮೂರು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.

ಬೆಂಕಿ ನಿಯಂತ್ರಣಕ್ಕೆ ಬಾರದೆ ಇರುವ ಬಗ್ಗೆ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಮಾತನಾಡಿದ್ದು, ಸದ್ಯ ಬೆಂಕಿ ನಂದಿಸಲು ಹತೋಟಿಗೆ ಸಿಗುತ್ತಿಲ್ಲ. ನಮ್ಮ ಎಲ್ಲಾ ಸಿಬ್ಬಂದಿಗಳು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 1.30 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆರು ಅಗ್ನಿ ಶಾಮಕ ವಾಹನ ಹಾಗೂ ನಗರದಲ್ಲಿರುವ ಬೇರೆ ವಾಹನವನ್ನು ಬಳಸಿಕೊಳ್ಳಲಾಗಿದೆ. ಇಷ್ಟಾದರೂ ಬೆಂಕಿ ಹತೋಟಿಗೆ ಬರುತ್ತಿಲ್ಲ. ಗಾಳಿ ಪ್ರಮಾಣ ಜಾಸ್ತಿ ಇರುವ ಕಾರಣ ಬೆಂಕಿ ನಂದಿಸುವುದು ಅಷ್ಟು ಸುಲಭವಾಗಿಲ್ಲ.

ಬೆಟ್ಟದ ಕೆಳಭಾಗದಲ್ಲಿರುವ ಲೇಔಟ್ ನಲ್ಲಿ ಸಾರ್ವಜನಿಕರು ಕಸಕ್ಕೆ ಬೆಂಕಿ ಹಾಕಿರುವ ಕಾರಣ ಬೆಟ್ಟಕ್ಕೂ ಬೆಂಕಿ ವ್ಯಾಪಿಸಿದೆ. ಬೆಟ್ಟದ ಎಲ್ಲಾ ಕಡೆಗೂ ಅಗ್ನಿಶಾಮಕ ದಳವನ್ನು ಕಳುಹಿಸಲಾಗಿದೆ. ಬಿಸಿಲಿನ ತಾಪ, ಕುರುಚಲು ಗಿಡಗಳು ಇರುವ ಕಾರಣ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ನಂದಿಸುವುದಕ್ಕೆ ಕಷ್ಟವಾಗುತ್ತಿರುವುದು ಸ್ಥಳೀಯರಿಗೆ ಆತಂಕ ತಂದೊಡ್ಡಿದೆ. ಅದರಲ್ಲೂ ಬೆಟ್ಟದ ಕೆಳಗೆ ವಾಸಿಸುವವರನ್ನು ಭಯಪಡಿಸಿದೆ. ಬೆಂಕಿ ಊರಿನ ಒಳಗೆ ಬಂದರೆ ಏನು ಮಾಡುವುದು ಎಂಬ ಆತಂಕದಲ್ಲಿದ್ದಾರೆ.

