ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.06) : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಚುನಾವಣೆ ಡಿ.12 ಕ್ಕೆ ರಾಜ್ಯದಲ್ಲಿ ನಡೆಯಲಿದ್ದು, ಡಿ.19 ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಶೋಕ ಹಾರನಹಳ್ಳಿ ತಿಳಿಸಿದರು.
ಚುನಾವಣೆ ನಿಮಿತ್ತ ಇಡಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಅಶೋಕ ಹಾರನಹಳ್ಳಿ ಶನಿವಾರ ಚಿತ್ರದುರ್ಗ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಂದುವರೆದ ಜನಾಂಗವೆಂದು ಬ್ರಾಹ್ಮಣರು ಹಣೆಪಟ್ಟಿ ಕಟ್ಟಿಕೊಂಡಿರುವುದನ್ನು ಬಿಟ್ಟರೆ ಅನೇಕರು ಅಡುಗೆ ಭಟ್ಟರು, ಪುರೋಹಿತರಾಗಿ ಇಂದಿಗೂ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.
ವಿಪ್ರ ಸಮುದಾಯದ ಅಭಿವೃದ್ದಿ ಪ್ರಾಧಿಕಾರವನ್ನು ಸರ್ಕಾರ ರಚನೆ ಮಾಡಿದೆ. ಮೀಸಲಾತಿಯಿಂದ ನಮ್ಮ ಜನಾಂಗ ವಂಚಿತವಾಗಿದೆ. ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ. ಹಾಗಾಗಿ ವಿಪ್ರ ಸಮಾಜಕ್ಕೆ ಸರಿಯಾದ ದಿಕ್ಖು ತೋರಿಸಬೇಕೆಂಬುದು ನಮ್ಮ ಮುಂದಿರುವ ಸವಾಲು. ಅದಕ್ಕಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ನನ್ನನ್ನು ಗೆಲ್ಲಿಸಿ ಬ್ರಾಹ್ಮಣ ಸಮುದಾಯದ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ವಿಪ್ರ ಮತದಾರರಲ್ಲಿ ಮನವಿ ಮಾಡಿದರು.
ಬ್ರಾಹ್ಮಣ ಜನಾಂಗವನ್ನು ಸಂಘಟಿಸಿ ಸ್ವರೂಪ ಬದಲಾಯಿಸಬೇಕೆಂಬ ಮಹದಾಸೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಿಸಬೇಕಿದೆ. ಸರ್ಕಾರದ ಸೌಲಭ್ಯ ಕೆಳಸ್ತರದವರಿಗೆ ತಲುಪುತ್ತಿಲ್ಲ.
ಬದಲಾವಣೆಯಿಲ್ಲದೆ ಯಾವ ಉಪಯೋಗವೂ ಇಲ್ಲ. ರಾಜ್ಯದಲ್ಲಿ ಐವತ್ತು ಸಾವಿರ ವಿಪ್ರ ಮತದಾರರಿದ್ದು, ಬೆಂಗಳೂರು, ಶಿವಮೊಗ್ಗ, ರಾಯಚೂರಿನಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಇನ್ನೂರು ಮತದಾರರಿದ್ದಾರೆ. ಮತದಾರರು ನೊಂದಣಿಯಾಗಿರಬೇಕು. ಜಿಲ್ಲಾವಾರು ಚುನಾವಣೆ ನಡೆಸಿ ಜಿಲ್ಲೆಯ ಪ್ರತಿನಿಧಿಗಳನ್ನು ಕೇಂದ್ರಕ್ಕೆ ಕಳಿಸುವ ಆಲೋಚನೆಯಿದೆ ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಸುರೇಶ್, ಹೊನ್ನಪ್ಪ, ಆರ್.ವಿ.ಸುಬ್ರಮಣ್ಯ, ಅನಂತ, ಪುರುಷೋತ್ತಮ, ರಾಜೇಂದ್ರಪ್ರಸಾದ್ ಹಾಗೂ ಚಿತ್ರದುರ್ಗ ಬ್ರಾಹ್ಮಣ ಸಂಘದ ನಿರ್ದೇಶಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.