ಚಿತ್ರದುರ್ಗ: ಅಧಿಕಾರ ಶಾಶ್ವತವಲ್ಲ. ಆದರೆ ನಾನು ಮಾಡಿದ ಅಭಿವೃದ್ದಿ ಕೆಲಸಗಳು ಮತದಾರರ ಮನದಲ್ಲಿ ಹತ್ತಾರು ವರ್ಷ ಉಳಿಯಬೇಕೆಂಬ ಆಸೆಯಿಂದ ರಾಜಕೀಯಕ್ಕೆ ಬಂದಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಪಂಪಾಪುರದಲ್ಲಿ ನಗರಘಟ್ಟದವರೆಗೆ ಒಂದು ಕೋಟಿ ರೂ.ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಸೋಮವಾರ ಪೂಜೆ ಸಲ್ಲಿಸಿ ಮಾತನಾಡಿದರು.
ಹೊಳಲ್ಕೆರೆ ಕ್ಷೇತ್ರಾದ್ಯಂತ ಇರುವ 493 ಹಳ್ಳಿಗಳಲ್ಲಿ ನೀರು, ವಿದ್ಯುತ್ ಸಮಸ್ಯೆ ಇಲ್ಲದಂತೆ ನೋಡಿಕೊಂಡಿದ್ದೇನೆ. ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದು ಹಾಗೂ ಗ್ರಾಮೀಣ ಭಾಗಗಳಿಗೆ ಗುಣಮಟ್ಟದ ರಸ್ತೆಗೆ ಕೋಟ್ಯಾಂತರ ರೂ.ಗಳನ್ನು ನೀಡಿದ್ದೇನೆ.
ಕೇವಲ ಅಭಿವೃದ್ದಿಯಷ್ಟೆ ಅಲ್ಲ. ಕ್ಷೇತ್ರದ ಮತದಾರರಿಗೆ ರಕ್ಷಣೆ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಎಲ್ಲಯೂ ಗಲಾಟೆ, ದೊಂಬಿ, ಘರ್ಷಣೆಗಳಿಗೆ ಅವಕಾಶ ನೀಡಿಲ್ಲ. ಈ ಭಾಗದ ಎಲ್ಲಾ ಕೆರೆಗಳಿಗೆ ತಾಳ್ಯ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವುದಾಗಿ ಹೇಳಿದ್ದೆ. ಹೊಳಲ್ಕೆರೆಯ ಚಿಕ್ಕಕೆರೆಗೆ ನೀರು ಬಂದ ಕೂಡಲೆ ಲಿಫ್ಟ್ ಮೂಲಕ ಕೆರೆಗಳಿಗೆ ನೀರು ಹರಿಸುತ್ತೇನೆಂದು ಭರವಸೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಿಂದಲೂ ಮತ ಚಲಾಯಿಸುತ್ತಲೆ ಬರುತಿದ್ದೀರ. ಚುನಾವಣೆ ಸಂದರ್ಭದಲ್ಲಿ ಬಂದು ಮರುಳು ಮಾತನಾಡಿ ಮತ ಕೇಳುವವರ ಡೋಂಗಿಗೆ ಬಲಿಯಾಗಬೇಡಿ. ನಿಮ್ಮ ಪರ ಅಭಿವೃದ್ದಿ ಕೆಲಸ ಮಾಡುವ ಯೋಗ್ಯರನ್ನು ಆಯ್ಕೆ ಮಾಡಿ. ಕಳೆದ ಮೂರು ವರ್ಷಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಕೆಲವರು ತೋಟಗಳನ್ನು ಉಳಿಸಿಕೊಂಡಿದ್ದೀರ. ಇನ್ನು ಕೆಲವರ ತೋಟಗಳು ಒಣಗಿವೆ.
ಜೋಗ್‍ಫಾಲ್ಸ್‍ನಿಂದ ನೇರವಾಗಿ ವಿದ್ಯುತ್ ಪಡೆಯುವುದಕ್ಕಾಗಿ 250 ಕೋಟಿ ರೂ.ವೆಚ್ಚದಲ್ಲಿ ಚಿಕ್ಕಜಾಜೂರು ಬಳಿ ವಿದ್ಯುತ್‍ಕೇಂದ್ರ ತೆರೆದು ಇನ್ನು ನೂರು ವರ್ಷಗಳ ಕಾಲ ಕರೆಂಟ್‍ಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ. ಮುಂದಿನ ಪೀಳಿಗೆಗೂ ನೀರು, ವಿದ್ಯುತ್‍ಗೆ ಅಭಾವವಾಗಬಾರದೆಂಬುದು ನನ್ನ ದೂರದೃಷ್ಟಿ ಎಂದು ಹೇಳಿದರು.
ಕ್ಷೇತ್ರಾದ್ಯಂತ ಎಲ್ಲೆಲ್ಲಿ ನೀರಿಗೆ ಸಮಸ್ಯೆಯಿತ್ತೊ ಅಲ್ಲೆಲ್ಲಾ ಕೆರೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಇಪ್ಪತ್ತೈದು ವರ್ಷಗಳಿಂದಲೂ ನಿರಂತರವಾಗಿ ಏಳು ಗಂಟೆಗಳ ಕಾಲ ವಿದ್ಯುತ್ ಕೊಡುವ ಕೆಲಸ ಮಾಡುತ್ತಿದ್ದೇನೆ. ಈ ಕ್ಷೇತ್ರ ಇನ್ನು ಅಭಿವೃದ್ದಿಯಾಗಿಲ್ಲ ಎನ್ನುವುದನ್ನು ನೋಡಿ ರಾಜಕೀಯಕ್ಕೆ ಬಂದೆ. ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ಕ್ಷೇತ್ರದ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಇದಕ್ಕೆ ಮತದಾರರ ಕೃಪಾಕಟಾಕ್ಷವು ಬೇಕು ಎಂದು ವಿನಂತಿಸಿದರು.
ಮತಿಘಟ್ಟದಿಂದ ದಗ್ಗೆ ಮಾರ್ಗವಾಗಿ ಟಿ.ನುಲೇನೂರು ಗೇಟ್‍ವರೆಗೆ ರಸ್ತೆ ಅಭಿವೃದ್ದಿಗಾಗಿ ಇಪ್ಪತ್ತೈದು ಕೋಟಿ ರೂ.ಗಳನ್ನು ನೀಡಿದ್ದೇನೆ. ರಸ್ತೆಗೆ ಕಾಂಕ್ರೆಟ್ ಹಾಕಿಸಿದ್ದೇನೆ. ಒಂದು ಕೋಟಿ ರೂ.ರಸ್ತೆಗೆ ನೀಡಿದ್ದೇನೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಇನ್ನು ಮೂವತ್ತು ವರ್ಷದವರೆಗೆ ಕ್ಷೇತ್ರದ ಜನರಿಗೆ ನೀರು ಕೊಡುತ್ತೇನೆ. ಪ್ರತಿ ಮನೆಗಳಿಗೂ ಕುಡಿಯುವ ನೀರಿಗೆ ನಲ್ಲಿಗಳನ್ನು ಅಳವಡಿಸುತ್ತೇನೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದು ಒಂದು ಕೋಟಿ ರೂ.ವೆಚ್ಚದಲ್ಲಿ ಚೆಕ್‍ಡ್ಯಾಂ ಕಟ್ಟಿಸಿದ್ದು, ನನ್ನ ಅಧಿಕಾರ ಇರುವತನಕ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತೇನೆ.
ಋಣಪಾತಕನಾಗಿ ಇರಲು ನನಗೆ ಇಷ್ಟವಿಲ್ಲ. ಹಾಗಾಗಿ ಕ್ಷೇತ್ರದ ಜನರ ಋಣ ತೀರಿಸಲು ಕಟಿಬದ್ದನಾಗಿದ್ದೇನೆಂದು ಆಶ್ವಾಸನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಚಿತ್ರಹಳ್ಳಿ ದೇವರಾಜ್ ಮಾತನಾಡಿ ನಾಲ್ಕು ವರ್ಷದಲ್ಲಿ ಎರಡು ಸಾವಿರ ಕೋಟಿ ರೂ.ಗಳನ್ನು ತಂದು ಶಾಸಕ ಎಂ.ಚಂದ್ರಪ್ಪ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾರೋ ಬಂದು ಬೆಣ್ಣೆ ಮಾತುಗಳನ್ನಾಡಿದರೆ ನಂಬಿ ಮತ ಹಾಕಬೇಡಿ. ನೀವು ಹಾಕುವ ಮತ ವ್ಯರ್ಥವಾದರೆ ಐದು ವರ್ಷಗಳ ಕಾಲ ಬಾಳು ಶೂನ್ಯವಾಗುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಅಭಿವೃದ್ದಿ ಮಾಡುವವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಹೊಳಲ್ಕೆರೆ ಕ್ಷೇತ್ರಾದ್ಯಂತ 493 ಹಳ್ಳಿಗಳಲ್ಲಿ ಯಾವುದೇ ಜಾತಿ ತಾರತಮ್ಯ ಮಾಡದೆ ಎಲ್ಲರ ನಡುವೆ ಬಾಂಧವ್ಯ ಬೆಸೆದಿರುವ ಶಾಸಕ ಎಂ.ಚಂದ್ರಪ್ಪ ಎಲ್ಲಾ ಕಡೆ ಸಿ.ಸಿ.ರಸ್ತೆ ನಿರ್ಮಿಸಿ, ಕೆರೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದಾರೆ. ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಮಾಡಿ ರಸ್ತೆ ರಾಜ ಎನ್ನುವ ಬಿರುದು ಪಡೆದಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಅವರನ್ನು ಬಹುಮತಗಳಿಂದ ಗೆಲ್ಲಿಸುವಂತೆ ವಿನಂತಿಸಿದರು.
ಜಿಲ್ಲಾ ಬಿಜೆಪಿ.ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಅಂಕಳಪ್ಪ, ಗ್ರಾಮದ ಮುಖಂಡ ಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಮ್ಮ, ನಿಂಗಪ್ಪ, ಹನುಮಂತಪ್ಪ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.