ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಕೊಡಿಸುವ ವಿಚಾರಕ್ಕೆ5 ಕೋಟಿ ಮೋಸ ಮಾಡಿದ್ದ ಪ್ರಕರಣದಲ್ಲಿ, ಚೈತ್ರಾ ಜೊತೆಗೆ ಹಾಲಶ್ರೀ ಸ್ವಾಮೀಜಿಯೂ ಲಾಕ್ ಆಗಿದ್ದರು. ಇದೀಗ ಇಂದು ಹಾಲಶ್ರೀ ಸ್ಚಾಮೀಜಿ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಇಂದು ಜಾಮೀನು ಮಂಜೂರು ಮಾಡಿದ್ದಾರೆ. ಜಾಮೀನು ಮಂಜೂರಾದ ಹಿನ್ನೆಲೆ ಹಾಲಶ್ರೀ ಬಿಡುಗಡೆಯಾಗಿದ್ದಾರೆ.

ಈ ವೇಳೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕೇಸರಿ ಶಾಲು ಹೊದಿಸಿ, ಹಾಲಶ್ರೀಗೆ ಸ್ವಾಗತ ಕೋರಿದ್ದಾರೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮಾತನಾಡಿರುವ ಅಭಿನವ ಹಾಲಶ್ರೀ, ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು. ತನಿಖೆ ನಡೆಸುವಾಗ ಇದನ್ನು ಪರಿಗಣಿಸಬೇಕು. ಮುಂದೊಂದು ದಿನ ಈ ಪ್ರಕರಣದ ಬಗ್ಗೆ ನಾನು ಮಾತನಾಡುತ್ತೇನೆ. ನಮ್ಮನ್ನು ನಂಬಿ ಆರಾಧಿಸುವ ಸಮಾಜಕ್ಕೆ, ನಮ್ಮ ಮೇಲೆ ನಂಬಿಕೆಯಿಟ್ಟ ಭಕ್ತ ಸಮೂಹದ ಆಶಯಕ್ಕೆ ಯಾವುದೇ ಧಕ್ಕೆ ಬರದಂತೆ ಬದುಕು ಕಟ್ಟಿಕೊಂಡು ಬಂದಿದ್ದೇನೆ. ಮುಂದೆಯೂ ಅದೇ ರೀತಿ ಬದುಕುತ್ತೇನೆ ಎಂದಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿ, ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೊಡಿಸುವುದಾಗಿ ಚೈತ್ರಾ ನಂಬಿಸಿದ್ದರು. ಅದನ್ನು ನಂಬಿ ಗೋವಿಂದ ಬಾಬು ಐದು ಕೋಟಿ ಹಣವನ್ನು ನೀಡಿದ್ದರು. ಇದೇ ಕೇಸಲ್ಲಿ ಚೈತ್ರಾ ಅರೆಸ್ಟ್ ಆದ ಬೆನ್ನಲ್ಲೇ ಹಲವರ ಹೆಸರು ಹೊರಗೆ ಬಂದಿತ್ತು. ಅದರಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯ ಹೆಸರು ಕೂಡ ಒಂದು. ದೂರುದಾರರಿಂದ 1.5 ಕೋಟಿ ಪಡೆದ ಆರೋಪದ ಮೇಲೆ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಹಾಲಶ್ರೀ ಅವರಿಗೆ ಜಾಮೀನು ಸಿಕ್ಕಿದೆ.

