ಉಡುಪಿ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮುಸಲ್ಮಾನರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಜಾತ್ರೆಗಳಲ್ಲಿ ಮುಸಲ್ಮಾನ ಸಮುದಾಯದವರಿಗೆ ನಿರ್ಬಂಧ ಹೇರಲಾಗಿದೆ. ಇದು ಉಡುಪಿ ಜಾತ್ರೆಯಲ್ಲಿ ಶುರುವಾದ ಸಂಪ್ರದಾಯ ಇದೀಗ ಇಡೀ ರಾಜ್ಯದಲ್ಲಿ ಅಲ್ಲಲ್ಲಿ ಶುರುವಾಗಿದೆ. ಈ ಹಿನ್ನೆಲೆ ಇಂದು ಮುಸಲ್ಮಾನ ವರ್ತಕರು ಪೇಜಾವರ ಶ್ರೀಗಳನ್ನ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.
ಶ್ರೀರಾಮ ವಿಠಲ ಭವನದಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳನ್ನ ಭೇಟಿಯಾಗಿದ್ದಾರೆ. ಜಿಲ್ಲಾ ಸೌಹಾರ್ದ ಸಮಿತಿ, ಮುಸಲ್ಮಾನ ಮುಖಂಡರು, ಕ್ರೈಸ್ತ ಮುಖಂಡರು ಸೇರಿ ಸ್ವಾಮೀಜಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಜಾತ್ರೆಗಳಲ್ಲಿ ಮುಸ್ಲಿಂರಿಗೂ ಅವಕಾಶ ನೀಡಲು ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿ ಬಳಿಕ ಮಾತನಾಡಿದ ಶ್ರೀಗಳು, ಯಾರಿಂದ ಸಮಸ್ಯೆ ಆಗಿದೆ ಅವರೇ ಸಮಸ್ಯೆಯನ್ನ ಪರಿಹರಿಸಬೇಕು. ತಪ್ಪು ಮಾಡಿದವರನ್ನು ಶಿಕ್ಷಿಸಲಿ. ಆದರೆ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮಾಜಕ್ಕೆ ಅನ್ಯಾಯವಾಗುತ್ತದೆ. ನಾಲ್ಕು ಮುಖಂಡರು ಕುಳಿತು ಮಾತಾಡಿದರೆ ಸಮಸ್ಯೆ ಬಗೆಹರಿಯಲ್ಲ. ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಹುಡುಕಬೇಕು. ಈ ಬೆಳವಣಿಗೆಗೆ ಕಾರಣ ಏನೆಂಬುದು ವೇದಿಕೆಯಲ್ಲಿ ಕೂತು ಚರ್ಚೆ ಮಾಡಬೇಕಾಗಿದೆ ಎಂದಿದ್ದಾರೆ.