16 ವರ್ಷ ವಯಸ್ಸಿನ ನಂತರ, ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ತಿಳಿಸಿದೆ. ಪ್ರಕರಣವೊಂದಕ್ಕೆ ಹೈಕೋರ್ಟ್ ಈ ರೀತಿಯ ತೀರ್ಪು ನೀಡಿದೆ. ನ್ಯಾಯಾಲಯದ ಪ್ರಕಾರ, 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವೈವಾಹಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸೂಚಿಸಿದೆ.
ಇತ್ತೀಚೆಗಷ್ಟೇ ಪಠಾಣ್‌ಕೋಟ್‌ನಲ್ಲಿ 21ರ ಹರೆಯದ ಯುವಕ ಹಾಗೂ 16ರ ಹರೆಯದ ಯುವತಿ ಕುಟುಂಬದವರ ಒತ್ತಾಯದ ಮೇರೆಗೆ ವಿವಾಹವಾಗಿದ್ದರು. ಆದರೆ ಕುಟುಂಬದವರು ತಮ್ಮನ್ನು ಬೇರ್ಪಡಿಸಲು ಬಯಸುತ್ತಿದ್ದಾರೆ ಎಂದು ಆರೋಪಿಸಿ ದಂಪತಿ ಭದ್ರತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಸಂಬಂಧ ಸೋಮವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ, “ಅರ್ಜಿದಾರರು (ದಂಪತಿಗಳು) ತಮ್ಮ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ” ಎಂದು ಹೇಳಿದರು.
ನ್ಯಾಯಮೂರ್ತಿ ಬೇಡಿ ನಂತರ ಷರಿಯಾ ಕಾನೂನನ್ನು ಉಲ್ಲೇಖಿಸಿ, ಮುಸ್ಲಿಂ ಹುಡುಗಿಯ ವಿವಾಹವನ್ನು ‘ಮುಸ್ಲಿಂ ವೈಯಕ್ತಿಕ ಕಾನೂನು’ ನಿಯಂತ್ರಿಸುತ್ತದೆ ಎಂದು ಹೇಳಿದರು. ಸರ್ ದಿನ್‌ಶಾ ಫರ್ದುಂಜಿ ಮೊಲ್ಲಾ ಅವರ ‘ಪ್ರಿನ್ಸಿಪಲ್ಸ್ ಆಫ್ ಮೊಹಮೆದನ್ ಲಾ’ ಪುಸ್ತಕದ ಸೆಕ್ಷನ್ 195 ರ ಪ್ರಕಾರ 16 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿ ತನ್ನ ಇಷ್ಟದ ವ್ಯಕ್ತಿಯನ್ನು ಮದುವೆಯಾಗಬಹುದು ಎಂದು ನ್ಯಾಯಾಧೀಶರು ಹೇಳಿದರು. ಮತ್ತು ವರನ ವಯಸ್ಸು ಕೂಡ 21 ವರ್ಷಕ್ಕಿಂತ ಹೆಚ್ಚಿರುವುದರಿಂದ, ಈ ಮದುವೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಇದಾದ ಬಳಿಕ ನ್ಯಾಯಾಧೀಶರು ದಂಪತಿಯ ಭದ್ರತೆಯನ್ನು ಪಠಾಣ್‌ಕೋಟ್ ಪೊಲೀಸ್ ಆಡಳಿತಕ್ಕೆ ವಹಿಸಿದ್ದರು.