ಬೆಂಗಳೂರು: ಮುಂದಿನ ಬಾರಿ ಸಂಸದೆ ಸುಮಲತಾ ಅವರು ಬಿಜೆಪಿ ಪಕ್ಷ ಸೇರುತ್ತಾರೆ ಎಂಬೂಹಾಪೋಹಗಳು ಹರಿದಾಡುತ್ತಿವೆ. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು, ಎಲೆಕ್ಷನ್ ನಿಂತಾಗಿನಿಂದಲೂ ನಂಗೆ ಈ ಪ್ರಶ್ನೆ ಬರ್ತಾ ಇದೆ. ನಂಗೆ ನನ್ನ ಜಿಲ್ಲೆಯ ಅಭಿವೃದ್ಧಿ ಅಷ್ಟೇ ಮುಖ್ಯ. ಅಭಿವೃದ್ಧಿಗೆ ಎಲ್ಲೆಲ್ಲಿ ಏನೇನು ತರಬಹುದು ಅನ್ನೋದನ್ನ ಥಿಂಕ್ ಮಾಡ್ತೇನೆ. ನಾನು ಸ್ವತಂತ್ರವಾಗಿ ನಿಂತಾಗಲೂ ಜನ ಸಪೋರ್ಟ್ ಮಾಡಿದ್ದಾರೆ. ನಾನು ಇವತ್ತು ಒಂದು ಪಾರ್ಟಿಗೆ ಸೇರಬೇಕಾದರೂ ಮಂಡ್ಯ ಜಿಲ್ಲೆಯ ಜನ ಹೇಳಬೇಕು. ನಾನಾಗಿ ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಇನ್ನು ಮುಸ್ಕಾನ್ ಬಗ್ಗೆ ತನಿಖೆಯ ವಿಚಾರ ಮಾತನಾಡಿ, ತನಿಖೆ ಆಗಬೇಕು, ಆ ವಿಡಿಯೋದಲ್ಲಿ ಹೇಳಿರೋದು ನಿಜನಾ, ಆ ವಿಡಿಯೋ ನಿಜವಾದ್ದಲ್ಲ ಅಂತ ಏನೆಲ್ಲಾ ವಿಚಾರಗಳಿವೆ ತನಿಖೆ ಮಾಡಲಿ. ತನಿಖೆ ಮಾಡಿದರೆ ತಪ್ಪೇನು ಇಲ್ಲ. ಅದರಿಂದ ಸತ್ಯಾಂಶ ಹೊರ ಬರುತ್ತದೆ. ಈಗ ಸದ್ಯಕ್ಕೆ ನಮ್ಮ ಮಂಡ್ಯದಲ್ಲಿ, ರಾಜ್ಯದಲ್ಲೂ ವಾತಾವರಣ ಶಾಂತಿಯುತವಾಗಿಯೆ ಇದೆ. ರಾಜಕೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು.
ರಾಜಕೀಯ ನಾಯಕರು ಕೂಡ ಏನೇನೋ ಮಾತಾಡಿ ಕೆಡಿಸುವಂತ ಹೇಳಿಕೆ ಕೊಡಬಾರದು. ನಾವೇನೋ ಮಾತನಾಡುವುದು. ಅದರಿಂದ ನಮಗೇನೋ ರಾಜಕೀಯ ಲಾಭ ಬರುತ್ತಾ ಅಂತ ಯೋಚಿಸುವುದನ್ನು ನಾನು ಖಂಡಿಸುತ್ತೇನೆ. ನಾವೂ ಈ ಸಮಯದಲ್ಲಿ ಪ್ರೋತ್ಸಾಹ ನೀಡಬೇಕಿರುವುದು ಎಲ್ಲಾ ಸಮುದಾಯಗಳು ಶಾಂತಿ ಸೌಹಾರ್ದತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅದನ್ನ ಬಿಟ್ಟು ಉರಿಯೋ ಬೆಂಕಿಗೆ ತುಪ್ಪ ಹಾಕಿ ಇನ್ನಷ್ಟು ತುಪ್ಪ ಹಾಕಿ ಜೀವಂತವಾಗಿಡಬಾರದು ಎಂದಿದ್ದಾರೆ.