ಸುದ್ದಿಒನ್, ಚಿತ್ರದುರ್ಗ, (ಅ.01) : ಶರಣ ಸಂಸ್ಕøತಿ ಉತ್ಸವ- 2021’ ರಲ್ಲಿ ವಿವಿಧ ಕ್ಷೇತ್ರದ ಐವರು ಸಾಧಕರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ‘ಶರಣ ಸಂಸ್ಕøತಿ ಉತ್ಸವ- 2021’ ರ ಲೋಗೋ ಮತ್ತು ಆಹ್ವಾನಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಸ್ವಾಮೀಜಿ, ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಶಿಕಾರಿಪುರದ ಜುಬೇದ ವಿದ್ಯಾಸಂಸ್ಥೆಯ ಡಾ. ಅಮ್ಜದ್ ಹುಸೇನ್ (ಹಾಫಿಜ್ ಕರ್ನಾಟಕಿ), ದಾವಣಗೆರೆ ಸಿದ್ಧನಮಠದ ಜಾನಪದ ಜಂಗಮ ಹಾಗು ಕನಕಶ್ರೀ ಪ್ರಶಸ್ತಿ ಪುರಸ್ಕøತ ಯುಗಧರ್ಮ ರಾಮಣ್ಣ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ತಮಿಳುನಾಡು ಘಟಕದ ರಾಜ್ಯಾಧ್ಯಕ್ಷ ಎಸ್. ನಾಗರತಿನಂ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ಪ್ರಶಸ್ತಿ ಪುರಸ್ಕೃತರು ವಿವರ; ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಸ್ವಾಮಿಗಳು
ಒಂದು ಮಠದ ಪೀಠಾಧಿಕಾರಿಗಳಾಗಿ ಧರ್ಮಪ್ರಚಾರ, ಜಪ-ತಪೆÇೀನುಷ್ಟಾನಗಳಿಗೆ ಸೀಮಿತರಾಗದೆ ಆರೋಗ್ಯಪೂರ್ಣವಾದ ಸಮಾಜವನ್ನು ನಿರ್ಮಾಣ ಮಾಡಲು ಅವಿರತ ಶ್ರಮಿಸುತ್ತಿರುವವರು ಹೆಬ್ಬಾಳು ಶ್ರೀಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು. ಹಾವೇರಿ ಜಿಲ್ಲೆ, ಶಿಗ್ಗಾಂವಿ ತಾಲ್ಲೂಕು, ಕುಂದೂರಿನ ಶರಣ ಬಸವಣ್ಣಯ್ಯ ಮತ್ತು ಶರಣೆ ಹೇಮಾವತಿ ದಂಪತಿಗಳ ಸುಪುತ್ರರಾಗಿ ದಿ. 24-12-1957ರಲ್ಲಿ ಜನಿಸಿದ ಶ್ರೀಗಳು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು.
ಬಾಲ್ಯದಲ್ಲಿಯೇ ಸನ್ಯಾಸತ್ವದ ಬಗ್ಗೆ ಒಲವಿದ್ದ ಪೂಜ್ಯರು ಚಿತ್ರದುರ್ಗ ಮಠದ ಲಿಂ| ಮಲ್ಲಿಕಾರ್ಜುನ ಸ್ವಾಮಿಗಳ ಕೃಪೆಗೆ ಪಾತ್ರರಾಗಿ ಶ್ರೀಮಠದ ಶಾಖಾಮಠವಾದ `ಚಿಲುಮೆ ಮಠ’ಕ್ಕೆ ಪೀಠಾಧಿಕಾರಿಗಳಾಗಿ 1980ರಲ್ಲಿ ದೀಕ್ಷೆ ಪಡೆದರು. ಮುಂದೆ, ಹೆಬ್ಬಾಳುಮಠದ ಶ್ರೀ ರುದ್ರೇಶ್ವರ ಶ್ರೀಗಳು ಲಿಂಗೈಕ್ಯರಾದ ನಂತರ ಪೀಠಾಧಿಕಾರಿಗಳಾಗಿ ಪಟ್ಟಾಧಿಕಾರ ದೀಕ್ಷೆ ಪಡೆದು, ಶ್ರೀಮಠದಲ್ಲಿ ಬಸವಪುರಾಣ ಪ್ರವಚನ, ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಈವರೆಗೆ 6000ಕ್ಕು ಹೆಚ್ಚು ಜೋಡಿಗಳ ದಾಂಪತ್ಯ ಬದುಕಿಗೆ ಆಸರೆಯಾಗಿದ್ದಾರೆ.
ಹೆಬ್ಬಾಳು ಗ್ರಾಮದ ಸುತ್ತ ಹಬ್ಬ, ಜಾತ್ರೆ ನೆಪದಲ್ಲಿ ನಡೆಯುತ್ತಿದ್ದ ಪ್ರಾಣಿಬಲಿಯನ್ನು ಜನರ ಮನವೊಲಿಸಿ ನಿಲ್ಲಿಸಿದ ಶ್ರೀಗಳು, ಬಸವಪುತ್ಥಳಿ ರಥೋತ್ಸವ, ಕತ್ತಲಿನಿಂದ ಬೆಳಕಿನೆಡೆಗೆ, ಮನೆಯಲ್ಲಿ ಮಹಾಮನೆ ಮುಂತಾದ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಶ್ರೀ ರುದ್ರೇಶ್ವರ ವಿದ್ಯಾಸಂಸ್ಥೆ ಮೂಲಕ ಶಾಲಾ-ಕಾಲೇಜು ಆರಂಭಿಸಿ ಗ್ರಾಮೀಣ ಭಾಗದ ಜನರ ಶೈಕ್ಷಣಿಕ ಹಸಿವನ್ನು ನೀಗಿಸುತ್ತಿದ್ದಾರೆ.
ಮಠದ ಭಕ್ತರ ಸಹಕಾರದೊಂದಿಗೆ ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ, ನೆರೆ ಸಂತ್ರಸ್ತರಿಗೆ, ಕೋವಿಡ್-19 ಪೀಡಿತರಿಗೆ ಸಹಾಯ ಮಾಡುತ್ತಾ, ಜಗಲೂರು ತಾಲ್ಲೂಕಿನ ಏತನೀರಾವರಿ ಹೋರಾಟದಲ್ಲೂ ಪಾಲ್ಗೊಂಡಿದ್ದಾರೆ. ಗೋವುಗಳ ಸಂರಕ್ಷಣೆಗಾಗಿ ಗೋಶಾಲೆ ನಿರ್ಮಾಣ, ಸ್ವತಃ ಕೃಷಿಕರಾಗಿ ಕೃಷಿಯಲ್ಲಿ ನವೀನ ಪದ್ಧತಿಗಳನ್ನು ಅನುಸರಿಸುತ್ತಾ ಸುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.
ರವೀಂದ್ರ ಭಟ್ ಐನಕೈ:
ಖಡ್ಗಕ್ಕಿಂತ ಲೇಖನಿ ಹರಿತವಾದುದು ಎಂದು ನಂಬಿರುವ ತಮ್ಮ ಬರಹಗಳ ಮೂಲಕವೇ ಸಮಾಜಕ್ಕೆ ಆರೋಗ್ಯದ ಪಾಠಗಳನ್ನು ನೀಡುತ್ತಿರುವ ಶ್ರೀ ರವೀಂದ್ರ ಭಟ್ಟ ಐನಕೈ ನಮ್ಮ ಮಧ್ಯದಲ್ಲಿಯ ಒಬ್ಬ ಸೃಜನಶೀಲ ಪತ್ರಿಕೋದ್ಯಮಿ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಐನಕೈ ಗ್ರಾಮದ ಶ್ರೀ ಗಜಾನನ ಭಟ್ಟ ಮತ್ತು ಶ್ರೀಮತಿ ಮೀನಾಕ್ಷಿ ಭಟ್ಟ ದಂಪತಿಗಳಿಗೆ ದಿ. 07-07-1967ರಲ್ಲಿ ಜನಿಸಿದ ರವೀಂದ್ರರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಎಂ.ಎ. ಪದವಿ ಪಡೆದರು.
1990ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಮುಂದೆ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿ ಪತ್ರಿಕೆಗಳಲ್ಲೂ ಕೆಲಸ ಮಾಡಿ 1995ರಿಂದ ಕನ್ನಡದ ಹೆಮ್ಮೆಯ `ಪ್ರಜಾವಾಣಿ’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಚಲಿತ ವಿದ್ಯಮಾನಗಳನ್ನು ಕುರಿತು ತಮ್ಮ ಲೇಖನಿಯನ್ನು ಝಳಪಿಸುವ ಶ್ರೀಯುತರ ಬರಹಗಳಲ್ಲಿ ಅಡಗಿರುವುದು ಮಾನವೀಯ ಅಂತಃಕರಣ.
ಇದು ಅವರ `ಇವರೇ ಬರಮಾಡಿಕೊಂಡ ಬರ’, `ಹೆಜ್ಜೇನು’, `ಬದುಕು ಮರದ ಮೇಲೆ’, `ಮೂರನೇ ಕಿವಿ’, `ಸಂಪನ್ನರು’, `ಅಕ್ಷಯ ನೇತ್ರ’, `ಸಹಸ್ರಪದಿ’ ಮುಂತಾದ ಪ್ರಕಟಿತ ಕೃತಿಗಳಲ್ಲಿ ಕಾಣಿಸುತ್ತದೆ. ಸಾಹಿತ್ಯ ಮತ್ತು ಪತ್ರಿಕಾಕ್ಷೇತ್ರದ ಇವರ ಸಾಧನೆಗೆ ಕಾರ್ಯನಿರತ ಪತ್ರಕರ್ತರ ಪ್ರಶಸ್ತಿ, ಮಹಾತ್ಮಗಾಂಧಿ ಪ್ರಶಸ್ತಿ, ಚರಕ ಪ್ರಶಸ್ತಿ, ಎಚ್.ಎಸ್.ಕೆ. ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪತ್ರಿಕೋದ್ಯಮ ಪ್ರಶಸ್ತಿಗಳು ಲಭಿಸಿವೆ.
ಡಾ. ಅಮ್ಜದ್ ಹುಸೇನ್ (ಹಾಫಿಜ್ ಕರ್ನಾಟಕಿ);
ಸಾಮಾನ್ಯ ಶಿಕ್ಷಕನೊಬ್ಬನು ತನ್ನ ಸಮಾಜಮುಖಿ ಚಿಂತನೆಗಳ ಮೂಲಕ ಅಸಾಮಾನ್ಯ ವ್ಯಕ್ತಿ ಹಾಗು ಶಕ್ತಿಯಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಯಂತಿದ್ದಾರೆ ಡಾ. ಅಮ್ಜದ್ ಹುಸೇನ್‍ರವರು. ಶಿಕಾರಿಪುರದ ಶಿಕ್ಷಕರಾದ ಶ್ರೀ ನಜೀರ್‍ಪಾಷ ಮತ್ತು ಶ್ರೀಮತಿ ಬಸೀರ್ ಉನ್ನೀಸಾ ದಂಪತಿಗಳ ಮಗನಾಗಿ ದಿ. 18-06-1964ರಲ್ಲಿ ಜನಿಸಿದ ಅಮ್ಜದ್ ಹುಸೇನ್ ವಿದ್ಯೆ ಮಾತ್ರವೇ ಬದುಕಿನಲ್ಲಿ ನಮ್ಮನ್ನು ಕಾಪಾಡಬಲ್ಲುದು ಎಂದು ನಂಬಿದವರು.
ಶಿಕ್ಷಕ ತರಬೇತಿಯನ್ನು ಪಡೆದು ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರೂ `ಕಲಿಕೆಗೆ ಕೊನೆ ಇಲ್ಲ’ ಎಂಬಂತೆ ಮುಂದೆ ಎಂ.ಎ.,ಬಿ.ಇಡಿ., ಪದವಿಯನ್ನು ಪಡೆದರು. ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯದ ಗೀಳನ್ನು ಹೊಂದಿ ವಿಶೇಷವಾಗಿ ಮಕ್ಕಳ ಸಾಹಿತ್ಯ ರಚನೆಗೆ ಒತ್ತು ನೀಡುತ್ತಾ ಈವರೆಗೆ 51 ಕವನ ಸಂಕಲನಗಳು, 37ಕ್ಕು ಹೆಚ್ಚು ಗದ್ಯ ಕೃತಿಗಳನ್ನು ಹೊರತಂದಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುತ್ತ, `ಮದರಸಾ’ವನ್ನು ತೆರೆದು ಸಮಾಜದ ಬಡ, ಅನಾಥ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದ್ದಾರೆ. ರಾಜ್ಯದ ವಿವಿಧ ಶಾಲಾ ಕಾಲೇಜು, ದೇವಾಲಯಗಳಲ್ಲಿ ಕೊಳವೆ ಬಾವಿಗಳನ್ನು ಹಾಕಿಸಿ ನೀರಿನ ದಾಹ ನೀಗಿಸಿದ್ದಾರೆ.
ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಶ್ರೀಯುತರು ಹಲವು ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಗುಲ್ಬರ್ಗಾ ಹಾಗು ಜೆರುಸಲೇಮ್ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿರುವ ಶ್ರೀಯುತರಿಗೆ ಹಲವು ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಸರ್ವಧರ್ಮ ಸಮನ್ವಯಕಾರರಾಗಿ ನಾಡಿನ ವಿವಿಧ ಧರ್ಮಗುರುಗಳ ಜೊತೆ ಸೇರಿ ಸರ್ವಧರ್ಮ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಾಮರಸ್ಯ ಮೆರೆದಿದ್ದಾರೆ.
ಶ್ರೀ ಯುಗಧರ್ಮ ರಾಮಣ್ಣ;
`ಪುಸ್ತಕ ಸರಿ ಇದ್ದರೆ, ಪುಸ್ತಕ ಸುಟ್ಟು ಬರೆಯಬಹುದು | ಅದರ ವಿಸ್ತಾರ ವಿಕಾಸ ಆದಂತೆ ಎಂತೆಂಥ ಹಸ್ತಪ್ರತಿ ಹೊರಡುವುದೋ ಯುಗಧರ್ಮ’ ಎಂಬಂತಹ ಸಾವಿರಾರು ತ್ರಿಪದಿ, ವಚನ, ಲಾವಣಿಗಳನ್ನು ಹಾಡುವ ಆಶುಕವಿ ಯುಗಧರ್ಮ ರಾಮಣ್ಣನವರು ಗ್ರಾಮ್ಯ ಸಿರಿಯನ್ನೇ ನೆಲೆಯಾಗಿಸಿಕೊಂಡ ದೇಸಿ ಪದಶಕ್ತಿಯ ಶಬ್ದಗಾರುಡಿಗ.
ಭವದ ಬದುಕಿಗೆ ಭರವಸೆ ಮೂಡಿಸುತ್ತಾ ಸಂಕಟಗಳನ್ನೇ ಸಾಧನೆಗೆ ಸೋಪಾನವಾಗಿಸಿಕೊಂಡ ರಾಮಣ್ಣನವರು ದಾವಣಗೆರೆ ಜಿಲ್ಲೆಯ ಸಿದ್ಧನಮಠ ಗ್ರಾಮದ ಕೃಷಿಕ ಕೆಂಚಪ್ಪ ಮತ್ತು ಹುಚ್ಚಮ್ಮ ದಂಪತಿಗಳಿಗೆ ದಿ. 10.06.1938ರಲ್ಲಿ ಜನಿಸಿದರು. ಕಿತ್ತು ತಿನ್ನುವ ಬಡತನ, ಊಟಕ್ಕು ಪರದಾಟ ನಡೆಸುತ್ತ ಜೀತದಾಳಾಗಿ ದುಡಿಯುತ್ತಿದ್ದ ಇವರ ಬದುಕಿನಲ್ಲಿ ಮಹಾಕವಿ ಕಾಳಿದಾಸನಂತೆ 1972 ರಲ್ಲಿ ವಿಸ್ಮಯ ಪ್ರಸಂಗವೊಂದು ನಡೆದು ಆ ಕ್ಷಣದಿಂದಲೇ ಕವಿತೆ, ವಚನ, ತ್ರಿಪದಿ, ಲಾವಣಿಗಳನ್ನು ಬರೆಯಲು ಆರಂಭಿಸಿದರು.
ಒಂದನೇ ತರಗತಿಯಲ್ಲಿ ಐದುಬಾರಿ ಫೇಲಾದ, ಕುರಿತೋದದೆಯುಂ ಕಾವ್ಯ ಪ್ರಯೋಗಮತಿಯಾದ ಯುಗಧರ್ಮ ರಾಮಣ್ಣ, `ಯುಗಧರ್ಮ ತತ್ವಪದಗಳು’, `ಯುಗಧರ್ಮ ತ್ರಿಪದಿ’, `ಕನ್ನಡಮ್ಮನ ತೇರು’, `ವಚನ ಧರ್ಮ ಮತ್ತು ತೋಚಿದ್ಗೀಚು’ ಎಂಬ 5 ಕೃತಿಪುಷ್ಪಗಳನ್ನು ಕನ್ನಡಮ್ಮನ ಸಿರಿ ಮುಡಿಗೇರಿಸಿದ ದಾರ್ಶನಿಕ ಕವಿ. ಅಭಿನವ ಸರ್ವಜ್ಞನಂತೆ ನಾಡಿನೆಲ್ಲೆಡೆ ಸುತ್ತುತ್ತ ಸುಮಾರು 13500ಕ್ಕು ಹೆಚ್ಚು ಕಾರ್ಯಕ್ರಮಗಳಲ್ಲಿ ಬುದ್ಧ, ಬಸವ, ಕನಕ, ನಿಜಗುಣರು ಹಾಗು ನಮ್ಮ ಜನಪದರ ಆಶಯಗಳನ್ನು ಬಿತ್ತುತ್ತಾ ಬಂದಿರುವ ಈ ಜಾನಪದ ಕೃಷಿಕ ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದಲ್ಲಿ `ದಡ್ರಪದ ವಿಶ್ವವಿದ್ಯಾಲಯ’ವನ್ನು ಕಟ್ಟಿ ಇಂದಿನ ತಲ್ಲಣದ ಬದುಕಿಗೆ ನೆಮ್ಮದಿಯ ದಾರಿಯಾದ ಜನವಾಣಿ ಜನಪದದ ಲೋಕಜ್ಞಾನವನ್ನು ತಲುಪಿಸುತ್ತಿರುವ ಜಾನಪದ ಜಂಗಮ. ಯುಗಧರ್ಮ ರಾಮಣ್ಣನವರ ಸೇವೆಗೆ ನಾಡಿನ ಮಠಮಾನ್ಯಗಳು `ಜಾನಪದ ರತ್ನ’, `ಜಾನಪದ ಜಂಗಮ’, `ಜಾನಪದ ಕೋಗಿಲೆ’, `ಜಾನಪದ ಸಿರಿಮುಡಿ’ ಪ್ರಶಸ್ತಿಗಳನ್ನು, ಕರ್ನಾಟಕ ಸರ್ಕಾರವು 2010ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು 2020ರಲ್ಲಿ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಿವೆ.
ಎಸ್. ನಾಗರತಿನಂ;
ಜನಸಾಮಾನ್ಯರ ಬದುಕು ಹಸನಾಗಬೇಕೆನ್ನುವ ಕಾಳಜಿಯನ್ನು ತಮ್ಮ ಬದುಕಿನುದ್ದಕ್ಕೂ ವ್ಯಕ್ತಪಡಿಸುತ್ತ ಹೊರನಾಡಿನಲ್ಲಿದ್ದುಕೊಂಡು ಸಮುದಾಯದ ಏಳಿಗೆಗೆ ನಿರಂತರ ಶ್ರಮಿಸುತ್ತಿರುವವರು ಎಸ್. ನಾಗರತಿನಂ ಅವರು. ತಮಿಳುನಾಡಿನ ಮಧುರೈನಲ್ಲಿ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ಸರವಣನ್ ದಂಪತಿಯ ಸುಪುತ್ರರಾಗಿ ಜನಿಸಿದ ಶ್ರೀಯುತರು ಬಸವಣ್ಣನವರ ತತ್ವಸಿದ್ಧಾಂತಗಳನ್ನು ನಾಡಿನಾದ್ಯಂತ ಪ್ರಚಾರ ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
1990ರಲ್ಲಿ ವೀರಶೈವ ಜಂಗಮ ಎಂದು ಹೆಸರಿದ್ದ ಸಮುದಾಯವನ್ನು ವೀರಶೈವ ಮಹಾಸಭಾ ಎಂದು ನಾಮಕರಣ ಮಾಡಿಸಿ ಲಿಂಗಾಯತದ ಅನೇಕ ಒಳಪಂಗಡಗಳನ್ನು ಒಂದೆಡೆ ಸೇರಿಸಿ ದೊಡ್ಡ ಸಮುದಾಯ ಎಂಬುದನ್ನು ಸಾಬೀತುಪಡಿಸಿದರು. ತಮಿಳುನಾಡಿನಲ್ಲಿ 22ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಘಟಕಗಳನ್ನು ಸ್ಥಾಪಿಸಿ ನೋಂದಣಿ ಮಾಡಿಸಿ 30ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ ಎಂದು ತೋರಿಸಿಕೊಟ್ಟರು.
ಪ್ರತಿವರ್ಷ ಬಸವ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸುವುದರ ಮೂಲಕ ಸಮುದಾಯವನ್ನು ಒಂದೆಡೆ ಸೇರುವಂತೆ ಬೃಹತ್ ಸಮಾವೇಶಗಳನ್ನು ನಡೆಸುತ್ತ ಬಂದಿದ್ದಾರೆ. ಕರ್ನಾಟಕದ ಅನೇಕ ಮಠಮಾನ್ಯಗಳ ಸಂಪರ್ಕ ಇಟ್ಟುಕೊಂಡಿರುವ ಶ್ರೀಯುತರಿಗೆ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಮುರುಘಾ ಶರಣರೆಂದರೆ ಎಲ್ಲಿಲ್ಲದ ಭಕ್ತಿ ಮತ್ತು ಪ್ರೀತಿ.