ಬೆಂಗಳೂರು: ಜಾತಿ ನಿಂದನೆ ಹಾಗೂ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ಮುನಿರತ್ನ ಅವರಿಗೆ ನಿನ್ನೆಯಷ್ಟೇ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಮುನಿರತ್ನ ಹೊರಗೆ ಬಂದು, ಮಾಮೂಲಿಯಂತೆ ಇರಲು ಸಾಧ್ಯವಾಗಲೇ ಇಲ್ಲ. ಅದರ ಹಿಂದೆಯೇ ಅತ್ಯಾಚಾರ ಕೇಸ್ ಕೂಡ ದಾಖಲಾಗಿದ್ದ ಕಾರಣ, ಇಂದು ಮತ್ತೆ ಅರೆಸ್ಟ್ ಆಗಿದ್ದಾರೆ. ರಾಮನಗರದ ಕಗ್ಗಲೀಪುರ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ರಾಮನಗರದ ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2020ರಿಂದ 2022ರವರೆಗೂ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಈಗ ಮುಬಿರತ್ನ ಅವರನ್ನು ಬಂಧಿಸಿದ್ದಾರೆ.

ಮುನಿರತ್ನ ಬಗ್ಗೆ ಈಗ ಹಲವು ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಸಂತ್ರಸ್ತೆಯೇ ದಾಖಲಿಸಿರುವಂತೆ ಮುನಿರತ್ನ ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳು ಇವೆಯಂತೆ. ರಾಜಕೀಯ ಎದುರಾಳಿಗಳನ್ನು ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಮಾಡುವ ಷಡ್ಯಂತ್ರ ಹೂಡಿದ್ದರಂತೆ. ಅಷ್ಟೇ ಅಲ್ಲ, ಹೆಚ್ಐವಿ ಸೋಂಕಿತರನ್ನು ಬಳಸಿಕೊಳ್ಳುತ್ತಿದ್ದರಂತೆ. ಜೊತೆಗೆ ಅಟ್ರಾಸಿಟಿ ಕೇಸುಗಳ ದುರ್ಬಳಕೆಯನ್ನು ಮಾಡಿಕೊಳ್ಳುತ್ತಿದ್ದರು ಎಂಬ ಗಂಭೀರ ಆರೋಪಗಳನ್ನು ಸಂತ್ರಸ್ತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಹಣ ಕೊಟ್ಟು, ಪ್ರಭಾವ ಬಳಸಿ ಕೆಲವರ ಮೇಲೆ ಅಟ್ರಾಸಿಟಿ ಕೇಸ್ ಗಳನ್ನು ಹಾಕಿಸುತ್ತಿದ್ದರಂತೆ. ಈ ಹಿಂದೆ ಆರ್ ಆರ್ ನಗರದಲ್ಲಿ ಹಲವರ ವಿರುದ್ಧ ಅಟ್ರಾಸಿಟಿ ಕೇಸ್ ಗಳನ್ನು ದಾಖಲಿಸಿದ್ದಾರೆ ಎಂದು ದೂರಿದ್ದಾರೆ. ಮುನಿರತ್ನ ಬಗ್ಗೆ ಇಷ್ಟೊಂದು ವಿಚಾರ ತಿಳಿದು ರಾಜಕಾರಣಿಗಳೇ ಶಾಕ್ ಆಗಿದ್ದಾರೆ. ಸದ್ಯ ಅತ್ಯಾಚಾರ ಆರೋಪದಲ್ಲಿ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

