ಅಯೋಧ್ಯೆ: ಬಹುದಿನಗಳಿಂದ ಕಾಯುತ್ತಿದ್ದ ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿದೆ.
ರಾಮಮಂದಿರ ಉದ್ಘಾಟನಾ ಸಮಾರಂಭದ ಬಗ್ಗೆ ಕೇಂದ್ರ ಈಗಾಗಲೇ ಹಲವು ಬಾರಿ ಹೇಳಿದ್ದರೂ, ಈ ಬಾರಿ ರಾಮಮಂದಿರ ನಿರ್ಮಾಣ ಸಮಿತಿ ದಿನಾಂಕ ಬಹಿರಂಗಪಡಿಸಿದೆ. ಈ ಉದ್ಘಾಟನೆ ನಿಮಿತ್ತ ಹತ್ತು ದಿನಗಳ ಕಾಲ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ರಾಮಮಂದಿರದ ಉದ್ಘಾಟನಾ ಸಮಾರಂಭವನ್ನು ದೇಶ ವಿದೇಶಗಳಲ್ಲಿ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.
ಅಯೋಧ್ಯೆ: ಕೋಟ್ಯಂತರ ಹಿಂದೂಗಳು ಎದುರು ನೋಡುತ್ತಿರುವ ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, 2024ರ ಜನವರಿ 14ರ ಮಕರ ಸಂಕ್ರಾಂತಿಯಂದು ದೇವಸ್ಥಾನ ಉದ್ಘಾಟನೆಗೊಳ್ಳಲಿದೆ. 10 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಈ ಅದ್ಧೂರಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಿದ್ದಾರೆ ಎನ್ನಲಾಗಿದೆ. ದೇಶ-ವಿದೇಶಗಳಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನೃಪೇಂದ್ರ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣದ ಅಂಗವಾಗಿ ಈ ವರ್ಷ ಅಕ್ಟೋಬರ್ ವೇಳೆಗೆ ಮಂದಿರದ ನೆಲ ಮಹಡಿ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು. ನಾಲ್ಕು ಅಂತಸ್ತಿನ ಈ ಮಂದಿರ ನಿರ್ಮಾಣ ಪೂರ್ಣವಾದ ಬಳಿಕ ನೆಲಮಹಡಿಯನ್ನು ರಾಮನ ಕಥೆಗಾಗಿಯೇ ಮೀಸಲಿಡಲಾಗುವುದು ಎಂದರು. ನೆಲ ಮಹಡಿಯ ಒಟ್ಟು ವಿಸ್ತೀರ್ಣ 360 ಅಡಿ ಉದ್ದ ಮತ್ತು 235 ಅಡಿ ಅಗಲವಿದೆ. ಒಟ್ಟು ಐದು ಮಂಟಪಗಳಿವೆ. ಗರ್ಭಗುಡಿಯ ಮೇಲಿರುವ 161 ಅಡಿ ಗೋಪುರವಾಗಿರುವ ಈ ರಚನೆಗೆ ನಾಲ್ಕು ಲಕ್ಷ ಕ್ಯೂಬಿಕ್ ಅಡಿ ರಾಜಸ್ಥಾನದ ಅಮೃತಶಿಲೆಯನ್ನು ಬಳಸಲಾಗುವುದು. ಇದರಲ್ಲಿ ಯಾವುದೇ ಉಕ್ಕು ಅಥವಾ ಇಟ್ಟಿಗೆಗಳನ್ನು ಬಳಸುವುದಿಲ್ಲ. ನಗಾರ ಶೈಲಿಯಲ್ಲಿ ರಾಮಾಲಯ ನಿರ್ಮಾಣವಾಗಲಿದೆ ಎಂದ ನೃಪೇಂದ್ರ ಮಿಶ್ರಾ, ಇದರಲ್ಲಿ 46 ತೇಗದ ಮರದ ಬಾಗಿಲುಗಳಿರುತ್ತವೆ. ಗರ್ಭಗುಡಿಯ ಮುಖ್ಯದ್ವಾರಕ್ಕೆ ಚಿನ್ನದ ಲೇಪನ ಮಾಡಲಾಗುವುದು.. ಈ ದೇವಾಲಯದ ನಿರ್ಮಾಣ ಕನಿಷ್ಠ ಒಂದು ಸಾವಿರ ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದರು..
ಮೂರು ಎಕರೆಯಲ್ಲಿ ಮುಖ್ಯ ದೇವಾಲಯ ನಿರ್ಮಾಣವಾಗಲಿದೆ. ಈ ದೇವಾಲಯದ ಸುತ್ತ 9 ಎಕರೆ ಪ್ರದೇಶದಲ್ಲಿ ಗೋಡೆ ನಿರ್ಮಿಸಲಾಗುವುದು. ಗೋಡೆಯ ಮೇಲೆ ರಾಮಾಯಣವನ್ನು ಬಿಂಬಿಸುವ ಶಿಲ್ಪಗಳಿರಲಿವೆ. ದೇವಾಲಯದ ಮೂರು ದ್ವಾರಗಳು ಮತ್ತು ಗೋಪುರಕ್ಕೆ ಚಿನ್ನದ ಲೇಪನ ಮಾಡಲಾಗುವುದು. ನಿರ್ಮಾಣ ಪೂರ್ಣಗೊಂಡ ನಂತರ, ದೇವಾಲಯದ ಸಂಕೀರ್ಣವು ಯಾತ್ರಿಕರ ಕೇಂದ್ರ, ವಸ್ತುಸಂಗ್ರಹಾಲಯ, ದಾಖಲೆಗಳು, ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಪೂಜೆಗಳನ್ನು ನಿರ್ವಹಿಸಲು ವಿಶೇಷ ಸ್ಥಳ, ದೇವಾಲಯದ ಅಧಿಕಾರಿಗಳಿಗೆ ಆಡಳಿತ ಕಟ್ಟಡಗಳು ಮತ್ತು ದೇವಾಲಯದ ಅರ್ಚಕರಿಗೆ ವಸತಿ ಸೌಕರ್ಯವನ್ನು ಹೊಂದಿರುತ್ತದೆ ಎಂದು ತಿಳಿಸಿದರು.