ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 17 : ಜಾತಿ ಧರ್ಮದ ಕಟ್ಟುಪಾಡುಗಳನ್ನು ಮೀರಿ ಹಿಂದೂ-ಮುಸಲ್ಮಾನರು ಕೂಡಿಕೊಂಡು ಭಾವೈಕ್ಯತೆಯ ಸಂಕೇತವಾಗಿ ಆಚರಿಸುವ ಮೊಹರಂ ಮೆರವಣಿಗೆ ನಗರದಲ್ಲಿ ಬುಧವಾರ ನಡೆಯಿತು.
ದುಃಖ, ಬಲಿದಾನ, ಶೋಕಾಚರಣೆಯ ದಿನವನ್ನಾಗಿ ಆಚರಿಸುವ ಮೊಹರಂ ಹಬ್ಬದಲ್ಲಿ ದೇಹಕ್ಕೆ ಗಾಯ ಮಾಡಿಕೊಳ್ಳುವ ಸಂಪ್ರದಾಯ ಕೆಲವೆಡೆ ಈಗಲೂ ಇದೆ. ಅದಕ್ಕಾಗಿಯೇ ಮೊಹರಂ ಹಬ್ಬಕ್ಕೆ ತನ್ನದೆ ಆದ ಮಹತ್ವವಿದೆ. ಒಂಬತ್ತು ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬದ ಕೊನೆ ಹತ್ತನೆ ದಿನವೇ ಪಂಜ ಮೆರವಣಿಗೆ ಹೊರಡುತ್ತದೆ. ಉಪವಾಸ ಆಚರಿಸುವ ಸಂಕಲ್ಪ ಮಾಡುವುದು ಹಬ್ಬದ ವಿಶೇಷ.
ಚೇಳುಗುಡ್ಡ, ಬುರುಜನಹಟ್ಟಿ, ಮಠದಕುರುಬರಹಟ್ಟಿಯಿಂದ ಮೆರವಣಿಗೆ ಮೂಲಕ ಬಂದ ಪಂಜಗಳು ಸೈಯದ್ ನಾ ಹಜರತ್ ಇಮಾಂ ಹಸ ಸೈಯದಾನಾ, ಹಜರತ್ ಇಮಾಂ ಹುಸೇನ್ ಅಶೋರಖಾನ ಇವರುಗಳ ದರ್ಗಾ ಬಳಿ ತೆರಳಿ ಪೂಜೆ ಸಲ್ಲಿಸಿದವು. ಗಾಂಧಿವೃತ್ತದಿಂದ ಹಿಡಿದು ದೊಡ್ಡಪೇಟೆಯವರೆಗೆ ರಸ್ತೆಯ ಎರಡು ಬದಿಗಳಲ್ಲಿ ಹಿಂದೂ-ಮುಸಲ್ಮಾನರು ಜಮಾಯಿಸಿ ಮೆರವಣಿಗೆ ವೀಕ್ಷಿಸಿದರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಗುಂಪು ಗುಂಪಾಗಿ ಜಮಾಯಿಸಿದ್ದ ಯುವಕರು ಡೊಳ್ಳು ತಮಟೆಗಳನ್ನು ಬಾರಿಸಿ ಕುಣಿದು ಕುಪ್ಪಳಿಸುತ್ತಿದ್ದುದು ಕಂಡು ಬಂದಿತು.
ಬೃಹದಾಕಾರವಾದ ಹಾರ, ಹೂವು ಮತ್ತು ಸುನೇರಿಗಳಿಂದ ಅಲಂಕರಿಸಿದ್ದ ಪಂಜಗಳ ಮೇಲೆ ಜನ ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸುತ್ತಿದ್ದರೆ ಇನ್ನು ಕೆಲವರು ಕೆಳಗೆ ಬಿದ್ದ ಮಂಡಕ್ಕಿಗಳನ್ನು ಆಯ್ದುಕೊಳ್ಳುತ್ತಿದ್ದುದು ಮೊಹರಂ ಹಬ್ಬದ ವಿಶೇಷವಾಗಿತ್ತು. ದರ್ಗಾಕ್ಕೆ ತೆರಳಿದ ಭಕ್ತರ ತಲೆಯ ಮೇಲೆ ನವಿಲುಗರಿಗಳನ್ನು ಮುಟ್ಟಿಸಲಾಗುತ್ತಿತ್ತು.
ದೊಡ್ಡಪೇಟೆ ಹಾಗೂ ಗಾಂಧಿವೃತ್ತದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.