ತುಮಕೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಭರ್ಜರಿ ಪ್ರಚಾರವೂ ಜೋರಾಗಿದೆ. ಮೂರು ಪಕ್ಷಗಳು ಚುನಾವಣೆಯ ಸಿದ್ಧತೆ ನಡೆಸಿಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಮೈತ್ರಿ ಪಕ್ಷವನ್ನು ಎದುರಿಸಬೇಕಿದೆ, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ಸೋಲಿಸುವ ಪ್ಲ್ಯಾನ್ ಮಾಡಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯೇ ಹೆಚ್ಚಿನ ಹೈಲೇಟ್ ಆಗಿದೆ.
ರಾಜಕಾರಣ ಎಂದರೇನೆ ಪಕ್ಷ ಪರ್ವ ಇದ್ದೇ ಇರುತ್ತದೆ. ಈ ಬಾರಿಯೂ ಟಿಕೆಟ್ ಸಿಗದವರು ಪಕ್ಷ ಬದಲಾಯಿಸುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಈ ಬೆನ್ನಲ್ಲೇ ತುಮಕೂರಿನಲ್ಲಿ ಬೆಳವಣಿಗೆಯೊಂದು ನಡೆದಿದೆ. ಮಾಜಿ ಸಂಸದ ಮುದ್ದಹನುಮೇಗೌಡ ಅವರು ಪಕ್ಷ ಬದಲಾವಣೆ ಮಾಡಿದ್ದಾರೆ. ಮತ್ತೆ ತಮ್ಮ ಮಾತೃ ಸಂಸ್ಥೆ ಕಡೆಗೆ ಮರಳಿದ್ದಾರೆ.
ಕೆಲವು ದಿನಗಳಿಂದ ಮುದ್ದಹನುಮೇಗೌಡರು ಬಿಜೆಪಿ ತೊರೆಯಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದೀಗ ಅದರಂತೆ ಮುದ್ದಹನುಮೇಗೌಡ ಅವರು ಬಿಜೆಪಿ ತೊರೆದಿದ್ದಾರೆ. ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುದ್ದಹನುಮೇಗೌಡರು ಸೇರ್ಪಡೆಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ಕೆ ಎನ್ ರಾಜಣ್ಣ ಅವರು ಇರಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಮಿಸ್ ಆದ ಹಿನ್ನೆಲೆ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದರು. ಆದರೆ ಬಿಜೆಪಿಯಿಂದಾನೂ ವಿಧಾನಸಭಾ ಟಿಕೆಟ್ ಸಿಗಲಿಲ್ಲ. ಈಗ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಲೋಕಸಭಾ ಟಿಕೆಟ್ ಕೂಡ ಮಿಸ್ ಆಗುವ ಸಾಧ್ಯತೆ ಇದೆ. ಹೀಗಾಗಿ ಮತ್ತೆ ಮರಳಿ ಮಾತೃಸಂಸ್ಥೆ ಕಡೆಗೆ ಬಂದಿದ್ದಾರೆ.