ಬೆಂಗಳೂರು: ಸದನದಲ್ಲಿ ಮೂಡಾ ಹಗರಣ ಸಾಕಷ್ಟು ಸದ್ದು ಮಾಡಿದೆ. ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸದನದಲ್ಲಿ ಮೂಡಾ ವಿಚಾರವಾಗಿ ಚರ್ಚೆಗೆ ಅವಕಾಶ ಕೇಳಿದ್ದಾರೆ. ಆದರೆ ಅವಕಾಶ ಸಿಗದ ಕಾರಣ ವಿಪಕ್ಷ ನಾಯಕರು ರೊಚ್ಚಿಗೆದ್ದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದಾರೆ.
ಬಳಿಕ ಘೋಷಣೆಗಳನ್ನು ಕೂಗುತ್ತಲೇ ರಾಜ್ಯಪಾಲರತ್ತ ಹೊರಟಿದ್ದಾರೆ. ಆರ್.ಅಶೋಕ್ ನೇತೃತ್ವದಲ್ಲಿ ರಾಜಭವನಕ್ಕೆ ಪ್ರಯಾಣ ಬೆಳೆಸಿದ್ದರು. ಶಾಸಕರು ಹಾಗೂ ಪರಿಷತ್ ಸದಸ್ಯರು ಜಾಥಾ ನಡೆಸಿದ್ದಾರೆ. ದಲಿತರ ಹಣ ತಿಂದು ತೇಗಿದ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ. ಮೂಡಾ ಹಗರಣದ ರುವಾರಿ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಎಂಬ ಘೋಷಣೆ ಕೂಗಿದ್ದಾರೆ.
ಪ್ರತಿಭಟನಾಕಾರರ ಕೈನಲ್ಲಿ ಬೋರ್ಡ್ ಗಳು ಕೂಡ ಕಂಡು ಬಂದಿವೆ. ಆ ಬೋರ್ಡ್ ಗಳಲ್ಲಿ ‘ಅತ್ತ ದಲಿತರ ಹಣವೂ ಲೂಟಿ. ಇತ್ತ ಮೂಡಾ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಸಚಿವ ಭೈರತಿ ಸುರೇಶ್ ಗೆ ಧಿಕ್ಕಾರ’ ಎಂದು ಕೂಗುವ ಬೋರ್ಡ್ ಗಳು ಕಂಡು ಬಂದಿವೆ.
ಈ ಎರಡು ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾರೆ. ಮೂಡಾ ಹಗರಣದಲ್ಲಿ ನಮ್ಮ ಕೈವಾಡವಿಲ್ಲ. ಜಮೀನಿನ ಪರಿಹಾರಕ್ಕಾಗಿ ಸೈಟ್ ಗಳನ್ನು ನೀಡಿದ್ದಾರೆವೆಂದು. ಹಾಗೇ ವಾಲ್ಮೀಕಿ ಹಗರಣದಲ್ಲೂ ಸ್ಪಷ್ಟನೆ ನೀಡಿದ್ದು ಈ ಹಗರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ. ಆದರೆ ಬಿಜೆಪಿ ನಾಯಕರು ಸದನ ಆರಂಭವಾದಾಗಿನಿಂದಲೂ ಹಗರಣಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.