ಮೂಡಾ ಹಗರಣ : ಪ್ರಾಸಿಕ್ಯೂಷನ್ ಗೆ ನೀಡಿದ ರಾಜ್ಯಪಾಲರು : ಸಿದ್ದರಾಮಯ್ಯರಿಂದ ತುರ್ತು ಸಭೆ..!

1 Min Read

 

 

ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ತುರ್ತು ಸಭೆ ಕರೆದಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಸಂಬಂಧ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸುತ್ತಿದ್ದಾರೆ. ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಗುಪ್ತಚರ ಇಲಾಖೆ ಮುಖ್ಯಸ್ಥ ಶರತ್ ಚಂದ್ರ ಭಾಗಿಯಾಗಿದ್ದಾರೆ.

ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇನ್ನು ಮೂಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಾಹಂ ರಾಜ್ಯಪಾಲರ ಬಳಿ ಮನವಿ ಮಾಡಿದ್ದರು. ಇದೀಗ ಇಂದು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ.

ರಾಜ್ಯಪಾಲರ ನಡೆಯನ್ನು ಕಾಂಗ್ರೆಸ್ ನ ನಾಯಕರು ಖಂಡಿಸಿದ್ದಾರೆ‌. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಕಾನೂನು ಬಾಹಿರ ನಡೆಯನ್ನು ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ಇನ್ನು ಹಲವು ನಾಯಕರು ಹೇಳಿದ್ದಾರೆ. ಇನ್ನು ಕೆಲವರು ಸಚಿವರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಕೃಷ್ಣದತ್ತ ಹೋಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *