ಬೆಂಗಳೂರು: ಮೂಡಾದಿಂದ ಹದಿನೈದು ಸೈಟುಗಳು ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರ ಹೆಸರಲ್ಲಿ ಇದೆ ಎಂಬುದು ತಿಳಿದ ಮೇಲೆ ಪ್ರತಿಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಆ ಸೈಟ್ ಕೊಟ್ಟಿದ್ದು ಯಾಕೆ, ಯಾರೂ ಎಂಬುದನ್ನು ಈಗಾಗಲೇ ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿರುವ ಎ.ಎಸ್.ಪೊನ್ನಣ್ಣ ಸ್ಪಷ್ಟನೆ ನೀಡಿದ್ದಾರೆ.
‘ಕಳೆದ ಎರಡು ಮೂರು ದಿನಗಳಿಂದ ಪ್ರತಿಪಕ್ಷಗಳು ಮೂಡಾ ಹಗರಣವನ್ನು ಪ್ರಸ್ತಾಪ ಮಾಡುತ್ತಿವೆ. ಸಿಎಂ ಧರ್ಮಪತ್ನಿಗೆ ಪರಿಹಾರ ನಿಡೀದ ವಿಚಾರದಲ್ಲಿ ಹಗರಣ ದೊಡ್ಡದಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಮುಖ್ಯವಾಗಿ ಇದೊಂದು ಹಗರಣ ಎಂದು ತೋರಿಸುವ ಪ್ರಯತ್ನ ಆಗುತ್ತಿದೆ. ಇದು ಬಿಜೆಪಿಗರು ದುರುದ್ದೇಶದ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿದೆ. ನಾಗರೀಕರು ಆಸ್ತಿ ಕಳೆದುಕೊಂಡಾಗ ಅದಕ್ಕೆ ಪರಿಹಾರ ಪಡೆಯುವುದು ಮೂಲಭೂತ ಹಕ್ಕು. ಅದು ಸಿಎಮ ಧರ್ಮಪತ್ನಿಯೇ ಆಗಲೀ, ಬೇರೆ ಯಾರೇ ಆಗಲಿ. ಅವರು ಕಳೆದುಕೊಂಡ ಆಸ್ತಿಗೆ ಪರಿಹಾರ ಪಡೆಯಬಹುದು ಎಂದಿದ್ದಾರೆ.
1998ರಲ್ಲಿ ಜಮೀನನ್ನು ಭೂಸ್ವಾಧೀನ ಮಾಡಲಾಗಿತ್ತು. ನಿಂಗಣ್ಣ ಎನ್ನುವವರಿಗೆ ಎನ್ನುವವರಿಗೆ ಆ ಜಮೀನು ಸೇರಿತ್ತು. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಸೇಲ್ ಡೀಡ್ ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿ ಸಿಎಂ ಸಿದ್ದರಾಮಯ್ಯರ ಧರ್ಮ ಪತ್ನಿಯ ಸಹೋದರ. 2005ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅದನ್ನು ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿದ್ದರು. 2010ರಲ್ಲಿ ದಾನ ಪತ್ರದ ಮೂಲಕ ಅವರ ಸಹೋದರಿ ಪಾರ್ವತಿಯವರಿಗೆ ವರ್ಗಾವಣೆ ಆಗಿತ್ತು. 2010 ರಲ್ಲಿ ಪಾರ್ವತಿಯವರಿಗೆ ಸೇರಿದ್ದ ಜಮೀನನ್ನು ಮುಡಾದವರು ನಿವೇಶನಕ್ಕಾಗಿ ಬಳಸಿಕೊಂಡಿರುತ್ತಾರೆ. 2014ರಲ್ಲಿ ಈ ಬಗ್ಗೆ ಮುಡಾ ದವರಿಗೆ ಪಾರ್ವತಿಯವರು ಪತ್ರ ಬರೆದಿದ್ದಾರೆ. ಮುಡಾದವರು ತಮ್ಮ ಜಮೀನು ಬಳಸಿಕೊಂಡಿದ್ದಾರೆ, ಅದಕ್ಕೆ ಪರಿಹಾರ ನೀಡಿ ಎಂದು ಕೇಳಿದ್ದಾರೆ. ಹೀಗಾಗಿ ಇದು ಬದಲಿ ನಿವೇಶನ ಅಲ್ಲ, ಇದು ಪರಿಹಾರ ರೂಪದ ನಿವೇಶನ. ಪರಿಹಾರದ ರೂಪದಲ್ಲಿ ಕೊಡಬೇಕಾದ ಹಣದ ಬದಲು ನಿವೇಶನ ನೀಡಲಾಗಿದೆ ಎಂದಿದ್ದಾರೆ.