ಬೆಂಗಳೂರು: ಈಗಂತೂ ವಿದ್ಯುತ್ ದರ ಏರಿಕೆಯ ವಿಚಾರವಾಗಿಯೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಒಂದು ಕಡೆ ಉಚಿತ ಅಂತ ಹೇಳುತ್ತಿರುವಾಗಲೇ ಮತ್ತೊಂದು ಕಡೆ ಏರಿಕೆಯ ಬಿಸಿಯೂ ತಟ್ಟಿದೆ. ಜನಸಾಮಾನ್ಯರ ಬೇಸರದ ನಡುವೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದೆ ಸುಮಲತಾ ಕೂಡ ಆಕ್ರೋಶ ಹೊರ ಹಾಕಿದ್ದಾರೆ.
“ವಿದ್ಯುತ್ ದರ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರಿಗೆ, ಕೈಗಾರಿಕೋದ್ಯಮಿಗಳಿಗೆ, ವರ್ತಕರು ಮತ್ತು ಸಣ್ಣ ಸಣ್ಣ ಉದ್ಯಮವನ್ನು ಅವಲಂಬಿಸಿರುವವರ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರಿದೆ.
ವಿದ್ಯುತ್ ದರದ ಹೊಡೆತಕ್ಕೆ ನಲುಗಿರುವ ಉದ್ಯಮಿಗಳು ಮತ್ತು ವರ್ತಕರು ದುಬಾರಿ ಬಿಲ್ ನಿಂದಾಗಿ ಕೈಗಾರಿಕೆಗಳನ್ನೇ ಮುಚ್ಚುವ ಪರಿಸ್ಥಿತಿ ಬರಲಿದೆ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಕೈಗಾರಿಕೆಗಳು ಮುಚ್ಚಿದರೆ ಅದರ ಪರಿಣಾಮ ಇನ್ನೂ ಘೋರ.
ಉದ್ಯಮಿಗಳ, ವರ್ತಕರು, ಸಾಮಾನ್ಯ ಜನರೂ ನಡೆಸುತ್ತಿರುವ ಪ್ರತಿಭಟನೆಯು ನ್ಯಾಯಯುತವಾಗಿದೆ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ, ವಿದ್ಯುತ್ ನಿಗಮಕ್ಕೆ ದರ ಇಳಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯೊಂದಿಗೆ ಒತ್ತಾಯಿಸುವೆ” ಎಂದು ಟ್ವೀಟ್ ಮಾಡಿದ್ದಾರೆ.