ಮೈಸೂರು: ಪ್ರಧಾನಿ ಬಗ್ಗೆ ಅಷ್ಟೊಂದು ಹಗುರವಾಗಿ ಮಾತನಾಡುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳ ಮಟ್ಟಿಗೆ ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಬಗ್ಗೆ ಅಷ್ಟೊಂದು ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳು ಅಫ್ಘಾನಿಸ್ತಾನಕ್ಕೆ ಕಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಸರ್ಕಾರವನ್ನ ಎಚ್ಚರಿಸಬೇಕು, ಸರ್ಕಾರ ವೈಫಲ್ಯ ತೋರಿಸಬೇಕು. ಅದನ್ನು ಬಿಟ್ಟು ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ದೇಶದಲ್ಲಿ ಯಾರು ಈ ರೀತಿ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಪ್ರತಿಪಕ್ಷದವರು ವಿವೇಚನೆ ಇಲ್ಲದಂತೆ ಮಾತನಾಡುತ್ತಿದ್ದಾರೆ. ಅವರ ಭಾಷಣಗಳನ್ನು ಕೇಳಲು ಬೇಸರವಾಗುತ್ತದೆ. ಎಷ್ಟು ದಿವಸ ಸಹನೆಯಲ್ಲಿ ಇರಲು ಸಾಧ್ಯ? ಎಂದು ಪ್ರಶ್ನಿಸಿದರು.