ಬ್ಯಾಂಕ್‍ಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮದಾನ

2 Min Read

ಚಿತ್ರದುರ್ಗ. ನ.21: ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರೆದರೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಅವರು ಎಚ್ಚರಿಸಿದರು.

 

ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಜರುಗಿದ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

 

ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಶಿಕ್ಷಣ, ಮನೆ ನಿರ್ಮಾಣ ಸೇರಿದಂತೆ ಸರ್ಕಾರಿ ಪ್ರಾಯೋಜಿತ ಯಾವುದೇ ಸ್ಕೀಂಗಳಲ್ಲಿ ನಿಗದಿಗೊಳಿಸಿದ ಗುರಿಗಳನ್ನು ಬ್ಯಾಂಕುಗಳು ಸಾಧಿಸಿಲ್ಲ.  ಬಡವರ ಕೆಲಸ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಯಾಕಿಷ್ಟು ತಾತ್ಸರ? ಎಂದು ಪ್ರಶ್ನಿಸಿದ ಸಂಸದರು, ರೈತರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಕಾಳಜಿ ಇಲ್ಲ, ನಬಾರ್ಡ್‍ನಿಂದ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಹೊರತುಪಡಿಸಿ, ಕುರಿ ಸಾಕಣಿಕೆ ಪ್ರಧಾನ ವೃತ್ತಿಯಾಗಿದೆ. ಆದರೆ ಬ್ಯಾಂಕುಗಳು ಇದುವರೆಗೂ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಿಲ್ಲ. ಬಡವರಿಗೆ ಸಾಲ ನೀಡಲು ಆಧಾರ ಕೇಳುವ ಬ್ಯಾಂಕುಗಳು, ಯಾವುದೇ ಆಧಾರ ಇಲ್ಲದೆ ಸಾವಿರಾರು ಕೋಟಿ ಸಾಲವನ್ನು ಉದ್ಯಮಿಗಳಿಗೆ ನೀಡುತ್ತವೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಅಸಮಧಾನ ಹೊರ ಹಾಕಿದರು.

 

ಸ್ವ-ಸಹಾಯ ಗುಂಪುಗಳಿಗೆ ಉದ್ದಿಮೆ ಸ್ಥಾಪಿಸಲು ಪ್ರೇರೇಪಿಸಿ :
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಪ್ರೇರೇಪಿಸಬೇಕು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್.ಆರ್.ಎಲ್.ಎಂ) ಅಡಿ ಉದ್ದಿಮೆ ನಡೆಸುವ ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಸಹಾಯಧನ ನೀಡಿ ಸಾಲ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸ್ವ-ಸಹಾಯ ಗುಂಪುಗಳು, ಅವುಗಳು ಬ್ಯಾಂಕಿನಲ್ಲಿ ಇರಿಸಿರುವ ಠೇವಣಿ, ಇವುಗಳಿಗೆ ಮಂಜೂರು ಮಾಡಿರುವ ಒಟ್ಟು ಸಾಲದ ಮೊತ್ತ, ಸಾಲ ಮರುಪಾವತಿ ಬಗ್ಗೆ ಸಂಪೂರ್ಣ ವಿವರವನ್ನು ಒದಗಿಸಬೇಕು. ತಾ.ಪಂ. ಇಓ ಗಳಿಂದ ಸ್ವ-ಸಹಾಯ ಸಂಘಗಳ ಕಾರ್ಯವೈಖರಿ ಪರಿಶೀಲನೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿನ ಮಹಿಳೆಯರಿಗೆ ಶೇಂಗಾ ಚಿಕ್ಕಿ ಹಾಗೂ ಗೋಕಾಕ್ ಕರದಂಟು ತಯಾರಿಸುವ ತರಬೇತಿಯನ್ನು ನೀಡಬೇಕು. ಇಂತಹ ಸ್ವ-ಸಹಾಯ ಗುಂಪುಗಳು ತಯಾರಿಸಿದ ಶೇಂಗಾ ಚಿಕ್ಕಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಖರೀದಿಸಿ, ಶಾಲಾ ಮಕ್ಕಳಿಗೆ ನೀಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.

 

ಜಿಲ್ಲೆಯಲ್ಲಿ 10,700 ಸ್ವ-ಸಹಾಯ ಗುಂಪುಗಳಿವೆ. ಎನ್.ಆರ್.ಎಲ್.ಎಂ ಅಡಿ 2024-25 ಸಾಲಿನಲ್ಲಿ 2340 ಸ್ವ-ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 1547 ಸಾಲ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 1402 ಸ್ವ ಸಹಾಯ ಗುಂಪುಗಳಿಗೆ ಸಾಲ ಮಂಜೂರು ಮಾಡಿದ್ದು, 145 ಅರ್ಜಿಗಳ ವಿಲೇವಾರಿ ಬಾಕಿಯಿದೆ ಎಂದು ಲೀಡ್ ಬ್ಯಾಂಕ್ ಮಾನೇಜರ್ ಕುಮಾರ್ ಬಾಬು ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕುಮಾರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಆರ್.ಬಿ.ಐ. ಪ್ರಬಂಧಕ ಅರುಣ್ ಕುಮಾರ್,  ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *