ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 10 : ಎಸ್.ಎಂ.ಕೃಷ್ಣ ಅವರು ಸಾಕಷ್ಟು ನಾಯಕರಿಗೆ ರಾಜಕೀಯದ ಪಾಠ ಹೇಳಿಕೊಟ್ಟಿದ್ದರು. ಬೆಂಗಳೂರನ್ನ ಐಟಿ ಹಬ್ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಲವರನ್ನು ರಾಜಕಾರಣದಲ್ಲಿ ಬೆಳೆಯುವಂತೆ ಮಾಡಿದ್ದರು. ಅವರು ನೀಡಿದ ಕೊಡುಗೆ ಅಪಾರ, ಮಾಡಿರುವ ಸೇವೆ ಸಾಗರದಷ್ಟು. ಅವರ ನಿಧನದಿಂದ ರಾಜ್ಯ ರಾಜಕಾರಣ ದುಃಖದಲ್ಲಿದೆ.
ವಯೋ ಸಹಜ ಅನಾರೋಗ್ಯದಿಂದ ನಿಧನರಾದ ಎಸ್.ಎಂ.ಕೃಷ್ಣ ಅವರಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಕೂಡ ಸಂತಾಪ ಸೂಚಿಸಿದ್ದಾರೆ.
ಎಸ್ ಎಂ ಕೃಷ್ಣ ನಿಧನಕ್ಕೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದು, ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ ಏಕೀಕರಣದ ಸಂಕೇತ ಅವರು. ಎಸ್ ಎಂ ಕೃಷ್ಣ ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣವಾಯ್ತು. ವಿಕಾಸಸೌಧ ಆಧುನೀಕರಣ, ಜಾಗತೀಕರಣದ ಸಂಕೇತ ಆಗಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿಸಿದ ಕೀರ್ತಿ, ಗೌರವ ಎಸ್ ಎಂ ಕೃಷ್ಣಗೆ ಸಲ್ಲುತ್ತದೆ.
ಪ್ರಪಂಚದ ಗಣ್ಯ ವ್ಯಕ್ತಿಗಳು ಮೊದಲು ಬೆಂಗಳೂರಿಗೆ ಬರುವ ರೂಡಿ ಮಾಡಿಕೊಂಡಿದ್ದಾರೆ. ಬೆಂಗಳೂರು ಭೇಟಿ ಬಳಿಕ ದೆಹಲಿಗೆ ತೆರಳುವ ಕಾಲ ಎಸ್ ಎಂ ಕೃಷ್ಣರ ಕಾಲದಲ್ಲಿ ಬಂತು. ಸಾರ್ವಜನಿಕ ಜೀವನದಿ ಕೀರ್ತಿ, ಗೌರವ ಹೆಚ್ಚಿಸಿದ ಸುಸಂಸ್ಕೃತ ರಾಜಕಾರಣಿ. ಎಸ್ ಎಂ ಕೃಷ್ಣರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಕುಟುಂಬಕ್ಕಾದ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಂಸದ ಕಾರಜೋಳ ಸಂತಾಪ ಸೂಚಿಸಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಹುಟ್ಟೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಅಂತ್ಯ ಸಂಸ್ಕಾರ ನಡೆಯಲಿದೆ. ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ.