ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನ ಹಗರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಸಂಸದ ಬಿವೈ ರಾಘವೇಂದ್ರ ಕೈವಾಡವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ ಹೀಗಾಗಿ ಈ ಪ್ರಕರಣ ಸಂಬಂಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನಲ್ಲಿ ದೊಡ್ಡ ಮಟ್ಟದ ಹಗರಣವೇ ನಡೆದಿದೆ. ಒಂದೊಂದು ಹುದ್ದೆಗೂ 40 ಲಕ್ಷ ಡಿಮ್ಯಾಂಡ್ ಮಾಡಿದ್ದಾರೆ. ಹುದ್ದೆ ನೀಡಲು ಅಷ್ಟು ದೊಡ್ಡಮಟ್ಟದ ಲಂಚ ಪಡೆದಿದ್ದಾರೆ. ಲಂಚದ ಹಣಕ್ಕೆ ಬ್ಯಾಂಕ್ ನಲ್ಲಿಯೇ ಸಾಲ ನೀಡಿದ್ದಾರೆ. ಈ ಹಗರಣದಲ್ಲಿ ಬಿವೈ ವಿಜಯೇಂದ್ರ ಅವರು ಭಾಗಿಯಾಗಿದ್ದಾರೆಂದು ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ದು, ಬಿಜೆಪಿಗರು ಬರ ಅಧ್ಯಯನ ಮಾಡುತ್ತಿದ್ದಾರೆ. ಬರಕ್ಕೆ ಮುಖ್ಯಮಂತ್ರಿಗಳು ಪರಿಹಾರದ ಹಣ ಬಿಡುಗಡೆ ಮಾಡಿದ್ದಾರೆ. ನಿಮ್ಮ ಕಾಲದಲ್ಲಿ ನೆರೆ ಬಂತು, ಏನಾದರೂ ಪರಿಹಾರ ಕೊಟ್ಟಿದ್ದೀರಾ..? ಕೇವಲ ಸಮೀಕ್ಷೆ ಮಾಡಿಕೊಂಡು ಹೋದ್ರಿ. ನಿಮ್ಮ ಪ್ರಧಾನಿ, ನಿಮ್ಮ ಸರ್ಕಾರ ಏನಾದರೂ ಪರಿಹಾರ ಕೊಡ್ತಾ ಎಂದು ಪ್ರಶ್ನಿಸಿದ್ದಾರೆ.
ಇದೆ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿದ್ದು, ನಾನು ಕೂಡ ಪ್ರಬಲ ಆಕಾಂಕ್ಷಿ. ಈ ಬಾರಿ ಲೋಕಸಭೆಗೆ ಸ್ಪರ್ಧಿಸುವ ಆಸೆ ಹೊಂದಿದ್ದೇನೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಚರ್ಚಿಸಿದ್ದೇನೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಎದುರಿಸಲು, ನಾನೇ ಪ್ರಬಲ ಸ್ಪರ್ಧಿ ಎಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.