ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಒಂದೇ ವರ್ಷ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಅಪರೂಪದ ಘಟನೆ ಗಮನ ಸೆಳೆದಿದೆ. ಈ ವಿಶೇಷ ಸಾಧನೆ ಗ್ರಾಮೀಣ ಭಾಗದ ಜನರಲ್ಲಿ ಹರ್ಷ ಮೂಡಿಸಿದ್ದು, ಶಿಕ್ಷಣದ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ವಿದ್ಯಾರ್ಥಿನಿ ಪಲ್ಲವಿ ಪರಪ್ಪ ಗಿರೆಣ್ಣವರ ನಾಗನೂರಿನ ಅಥರ್ವ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.78 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಮತ್ತೊಂದೆಡೆ, ಅವರ ತಾಯಿ ಶಿಲ್ಪಾ ಪರಪ್ಪ ಗಿರೆಣ್ಣವರ ವಡೇರಹಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಶೇ.54 ಅಂಕಗಳೊಂದಿಗೆ ಪಾಸ್ ಆಗಿದ್ದಾರೆ.
ಕಳೆದ 16 ವರ್ಷಗಳಿಂದ ಅಂಗನವಾಡಿ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿರುವ ಶಿಲ್ಪಾ, ಕುಟುಂಬದ ಜವಾಬ್ದಾರಿಗಳ ನಡುವೆಯೂ ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕಳೆದುಕೊಳ್ಳದೆ ಮಗಳೊಂದಿಗೆ ಓದಿ ಪರೀಕ್ಷೆಗೆ ಹಾಜರಾಗಿದ್ದಾರೆ. “ಬಿ.ಕಾಂ ಓದಲು ಹಂಬಲವಿದೆ. ಈ ಬಾರಿ ಪಿಯುಸಿ ಪಾಸ್ ಆದದ್ದು ನನಗೆ ತುಂಬ ಸಂತೋಷ ತಂದಿದೆ. ಮಗಳೇ ನನಗೆ ಓದಿನಲ್ಲಿ ನೆರವಾದಳು” ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಮಗಳೂ ತಾಯಿಯೂ ಪರಸ್ಪರ ಪ್ರೋತ್ಸಾಹ ನೀಡಿ ಸಾಧನೆ ಮಾಡಿರುವುದು ಸಮಾಜಕ್ಕೆ ಸ್ಪೂರ್ತಿದಾಯಕವಾಗಿದೆ. ವಿಶೇಷವಾಗಿ ಮಹಿಳೆಯರು ಯಾವುದೇ ವಯಸ್ಸಿನಲ್ಲಿ ಶಿಕ್ಷಣ ಮುಂದುವರಿಸಬಹುದು ಎಂಬ ಸಂದೇಶವನ್ನು ಈ ಘಟನೆ ನೀಡಿದೆ.
ಗ್ರಾಮೀಣ ಭಾಗದಲ್ಲಿಯೇ ಈ ರೀತಿಯ ಸಾಧನೆ ಸಂಭವಿಸಿರುವುದು ಸ್ಥಳೀಯರಲ್ಲಿ ಹೆಮ್ಮೆ ಮೂಡಿಸಿದ್ದು, ಶಿಕ್ಷಣದ ಕಡೆ ಹೆಚ್ಚು ಆಸಕ್ತಿ ತೋರಲು ಪ್ರೇರಣೆ ನೀಡುತ್ತಿದೆ.












