ಬೆಂಗಳೂರು: ಈ ಮೊದಲೇ ರಾಜ್ಯ ಸರ್ಕಾರ ನಕಲಿ ಬಿಪಿಎಲ್ ಕಾರ್ಡುದಾರರಿಗೆ ಎಚ್ಚರಿಕೆ ನೀಡಿತ್ತು. ರದ್ದು ಮಾಡುವ ಸೂಚನೆಯನ್ನು ನೀಡಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ 10 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡು ರದ್ದಾಗಿದೆ. ಆದರೆ ವಿಚಿತ್ರ ಎಂದರೆ ಆದಾಯ ತೆರಿಗೆ ಪಾವತಿಸದ, ಜಿಎಸ್ಟಿ ಕಟ್ಟದ, ಬಡತನ ರೇಖೆಗಿಂತ ಕೆಳಗಿರುವವರ ಬಿಪಿಎಲ್ ಕಾರ್ಡುಗಳೇ ರದ್ದಾಗಿವೆ. ಇದು ತಾಂತ್ರಿಕ ಕಾರಣದಿಂದಾಗಿ ರದ್ದಾಗಿವೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬಿಜೆಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಗರಂ ಆಗಿದ್ದಾರೆ. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸುವಾಗ ಆಕ್ರೋಶ ಹೊರ ಹಾಕಿದ ಕೋಟ ಶ್ರೀನಿವಾಸ್ ಪೂಜಾರಿ, ಸಿದ್ದರಾಮಯ್ಯ ಅವರೇ 12 ಲಕ್ಷ ಬಿಪಿಎಲ್ ಕಾರ್ಡು ರದ್ದು ಮಾಡುವುದನ್ನು ತಕ್ಷಣವೇ ತಡೆಯಬೇಕು. ತಡೆಯದೆ ಇದ್ದರೆ ನಿಖಿಲ್ ಕುಮಾರಸ್ವಾಮಿ ಗೆಲ್ತಾರೆ, ವಿಧಾನಸಭೆಯಲ್ಲಿ ಘರ್ಜಿಸುತ್ತಾರೆ. ಬಡವರ ರೇಷನ್ ಕಾರ್ಡ್ ರದ್ದಾದರೆ ಅದನ್ನು ವಾಪಸು ತರುವ ತಾಕತ್ತು ನಿಖಿಲ್ ಕುಮಾರಸ್ವಾಮಿಗೆ ಇದೆ.
ಈ ಸರ್ಕಾರ ಏನು ಬೇಕಾದರೂ ಮಾಡಿಕೊಳ್ಳಲಿ ಆದರೆ ಬಿಪಿಎಲ್ ಕಾರ್ಡ್ ರದ್ದಾದರೆ ನರೇಂದ್ರ ಮೋದಿಯವರು ಕೊಡುತ್ತಿರುವ 5 ಕೆಜಿ ಅಕ್ಕಿ ರದ್ದಾಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ರದ್ದಾಗುತ್ತದೆ. ಶಾಲಾ ಮಕ್ಕಳಿಗೆ ಕೊಡುವ ಯೋಜನೆ ರದ್ದಾಗುತ್ತದೆ. ಈ ಸರ್ಕಾರ ಎಂಥಾ ದುಸ್ಥಿತಿಗೆ ಬಂದಿದೆ. ಇವತ್ತು ಸಿದ್ದರಾಮಯ್ಯ ಕೈಯಲ್ಲಿ ಅಧಿಕಾರ ಇಲ್ಲ. ಆಡಳಿತ ನಡೆಸುತ್ತಿರುವುದು ಜಮೀರ್ ಅವರು ಎಂದು ಬಿಪಿಎಲ್ ಕಾರ್ಡ್ ರದ್ದತಿ ಹಾಗೂ ವಕ್ಫ್ ವಿವಾದ ಬಗ್ಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ ಹೊರ ಹಾಕಿದ್ದಾರೆ.