ಬೆಂಗಳೂರು: ಬದುಕಿರುವಾಗ ರಕ್ತದಾನ ಮಾಡುವಂತೆಯೇ ಮೃತರಾದ ಬಳಿಕ ಅಂಗಾಂಗ ದಾನ ಮಾಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದು ಸಚಿವ ಸುಧಾಕರ್ ಹೇಳಿದರು.
ಸ್ಪರ್ಶ್ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಬಳಿಕ ಮಾತನಾಡಿದ ಸಚಿವರು, ದೇಶದಲ್ಲಿ ಸುಮಾರು 2 ಲಕ್ಷ ಅಂಗಾಂಗ ಕಸಿಗೆ ಬೇಡಿಕೆ ಇದೆ. ಆದರೆ ಇದರಲ್ಲಿ ಶೇ.4 ರಷ್ಟು ಅಂಗಾಂಗ ದೊರೆಯುತ್ತಿದೆ. ಇದರಿಂದಾಗಿ ಅನೇಕರಿಗೆ ಅಂಗಾಂಗಗಳು ದೊರೆಯದೆ ನಿಧನ ಹೊಂದುತ್ತಿದ್ದಾರೆ. ವ್ಯಕ್ತಿ ಮರಣ ಹೊಂದಿದ ಬಳಿಕ ಅಂಗಾಂಗಗಳ ಮೂಲಕ ಎಂಟು ಜನರ ಜೀವ ಉಳಿಸಲು ಸಾಧ್ಯವಿದೆ. ಆದರೆ ಅನೇಕ ತಪ್ಪು ತಿಳಿವಳಿಕೆಯಿಂದ ಅಂಗಾಂಗ ದಾನ ಕಡಿಮೆಯಾಗಿದೆ. ಬದುಕಿರುವಾಗ ರಕ್ತದಾನ ಮಾಡುವಂತೆಯೇ ಸತ್ತ ನಂತರ ಅಂಗಾಂಗ ದಾನ ಮಾಡುವುದು ಅಗತ್ಯ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಜನ್ ಗಳಿಗೂ ಅಂಗಾಂಗ ಕಸಿ ಬಗ್ಗೆ ತರಬೇತಿ ನೀಡುವ ಬಗ್ಗೆ ಇಲ್ಲಿನ ತಜ್ಞರಿಗೆ ಕೋರಲಾಗಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಡ ಕುಟುಂಬಗಳ ವ್ಯಕ್ತಿಗಳಿಗೆ ಅಗತ್ಯವಿರುವವರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಅಂಗಾಂಗ ಕಸಿ ಮಾಡಲು ಕ್ರಮ ವಹಿಸಲಾಗುವುದು ಎಂದರು.
ನಿಮ್ಹಾನ್ಸ್ ನಲ್ಲಿ ಮೆದುಳು ಸತ್ತ ಪ್ರಕರಣಗಳು ಹೆಚ್ಚಾಗಿ ದೊರೆಯುತ್ತವೆ. ಆದ್ದರಿಂದ ಈ ಸಂಸ್ಥೆಯೊಂದಿಗೆ ಅಂಗಾಂಗ ಕಸಿಗಾಗಿ ಟೈ ಅಪ್ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ನಾಲ್ಕು ಹಳೆ ಮೆಡಿಕಲ್ ಕಾಲೇಜುಗಳಲ್ಲಿ ಅಂಗಾಂಗ ಕಸಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.