ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, (ಜು.04): ಪಠ್ಯ ಪುಸ್ತಕ ಶಿಕ್ಷಣದ ಜೊತೆ ಮಕ್ಕಳಿಗೆ ನೈತಿಕ ಶಿಕ್ಷಣ ಅತ್ಯವಶ್ಯಕ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ಬಿ. ಹೇಳಿದರು.
ಭೀಮಸಮುದ್ರ ರಸ್ತೆಯಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಗೆರೆ ಯೋಜನಾ ಕಚೇರಿಯಲ್ಲಿ ಮಂಗಳವಾರ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಬೆಳ್ಳಿ ಹಬ್ಬದ ಪ್ರಯುಕ್ತ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಆರಂಭಿಸಿದ್ದು, ರಾಜ್ಯದಲ್ಲಿ ಅರವತ್ತು ಸಾವಿರ ವಿದ್ಯಾರ್ಥಿಗಳಿಗೆ ಎಪ್ಪತ್ತು ಕೋಟಿ ರೂ.ಗಳನ್ನು ನೀಡಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 1300 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾಗಿದ್ದು, ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉತ್ತಮ ಸತ್ಪ್ರೆಜೆಗಳಾಗುವಂತೆ ಕರೆ ನೀಡಿದರು.
ಸಮಾಜದ ಎಲ್ಲಾ ವರ್ಗದವರಿಗೆ ಒಂದಲ್ಲ ಒಂದು ರೀತಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೆರವಿಗೆ ನಿಂತಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದುರ್ಬಲ ವರ್ಗದವರಿಗೆ ವಾತ್ಸಲ್ಯ ಮನೆ ನಿರ್ಮಾಣ. ಶಿಕ್ಷಕರುಗಳ ಕೊರತೆಯಿರುವ ಕಡೆ ಜ್ಞಾನದೀಪ ಶಿಕ್ಷಕರ ನೇಮಕ ಹಾಗೂ ಶಾಲೆಗಳಿಗೆ ಡೆಸ್ಕ್, ಬೆಂಚ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಶ್ರೀಮತಿ ಗೀತಾ ಬಿ. ತಿಳಿಸಿದರು.
ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ ದುಶ್ಚಟ ಎಂದರೆ ಕೇವಲ ಮದ್ಯಪಾನ, ಧೂಮಪಾನವಲ್ಲ. ಯುವ ಪೀಳಿಗೆ ಮೊಬೈಲ್ ಚಟಕ್ಕೆ ಬಲಿಯಾಗಿರುವುದು ದೊಡ್ಡ ದುರಂತ. ಮೊಬೈಲ್‍ನಲ್ಲಿ ಗೇಮ್, ಅಶ್ಲೀಲ ಚಿತ್ರಗಳ ವೀಕ್ಷಣೆಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವ್ಯಸನಕ್ಕೆ ಮಿತಿಯಿಲ್ಲದಂತಾಗಿದೆ. ದುಶ್ಚಟಗಳನ್ನು ಮೆಟ್ಟಿನಿಲ್ಲುವ ಶಕ್ತಿ ಯುವ ಜನಾಂಗಕ್ಕಿದೆ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುತ್ತಿರುವುದಲ್ಲದೆ ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಸುತ್ತಿದೆ. ಶಿಕ್ಷಣ, ಉದ್ಯೋಗಕ್ಕೆ ಯಾರಾದರೂ ಆಗಲಿ ಸಹಾಯ ಮಾಡಿದರೆ ಅದು ನಿಸ್ವಾರ್ಥತೆಯಿಂದ ಕೂಡಿರಬೇಕು. ಸುಜ್ಞಾನ ನಿಧಿ ಶಿಷ್ಯ ವೇತನ ಪಡೆದ ವೃತ್ತಿಪರ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಿ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್ ಮಾತನಾಡುತ್ತ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಎಲ್ಲಾ ವರ್ಗದವರಿಗೂ ಭದ್ರತೆ ಏನಾದರೂ ಕೊಡುತ್ತಿರುವ ಸಂಸ್ಥೆ ಯಾವುದಾದರೂ ಇದ್ದರೆ ಅದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾತ್ರ. ಇಡಿ ಸಮಾಜವನ್ನು ದುಶ್ಚಟ ಮುಕ್ತವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ಮಕ್ಕಳು ಆಸೆ ಆಮಿಷ ಆಕರ್ಷಣೆಗೆ ಒಳಗಾಗಬಾರದು. ಭಾರತದಲ್ಲಿ 27 ಕೋಟಿ 50 ಲಕ್ಷ ವ್ಯಸನಿಗಳಿದ್ದಾರೆ. ಇದರಲ್ಲಿ ಶೇ.53 ರಷ್ಟು ಪುರುಷರು, ಶೇ.47 ರಷ್ಟು ಮಹಿಳೆಯರಿದ್ದಾರೆ. ಶೇ.70 ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಜುನಾಯ್ಕ ಮಾತನಾಡಿ ಸ್ವಸಹಾಯ ಸಂಘಗಳಲ್ಲಿರುವ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಿಗುತ್ತಿರುವ ಇಂತಹ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಶಿಕ್ಷಣವಂತರಾಗುವ ಮೂಲಕ ತಂದೆ-ತಾಯಿ, ಗುರು-ಹಿರಿಯರು, ಸಮಾಜಕ್ಕೆ ಒಳ್ಳೆ ಕೀರ್ತಿ ತರಬೇಕೆಂದು ವೃತ್ತಿಪರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‍ನ ಜಿಲ್ಲಾ ನಿರ್ದೇಶಕ ದಿನೇಶ್‍ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಎ.ಜೆ.ಪ್ರವೀಣ್ ವೇದಿಕೆಯಲ್ಲಿದ್ದರು.