ನವದೆಹಲಿ: ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಸಂಶೋಧನ ಕಾರ್ಯವೂ ಶುರುವಾಗಿದೆ. ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿ ಹೋಗಿದ್ದಾರೆ. ಅದರ ಜೊತೆಗೆ ವಿಕ್ರಂ ಲ್ಯಾಂಡರ್ ಇಳಿದ ಜಾಗವನ್ನು ಶಿವಶಕ್ತಿ ಎಂದು ಘೋಷಣೆ ಮಾಡಲಾಗಿದೆ. ಈ ಬೆನ್ನಲ್ಲೇ ಚಂದ್ರನ ಜಾಗವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲು, ಆಲ್ ಇಂಡಿಯಾ ಹಿಂದೂ ಮಹಾಸಭಾದ ಅಧ್ಯಕ್ಷರು ಆಗ್ರಹಿಸಿದ್ದಾರೆ.
ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು, ಬೇರೆ ಧರ್ಮದವರು, ಬೇರೆ ದೇಶದವರು ಚಂದ್ರನ ಮೇಲೆ ಹಕ್ಕು ಸಾಧಿಸುವ ಮೊದಲೇ ಅದನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಬೇಕು. ಸಂಸತ್ ನಲ್ಲಿ ಈ ಸಂಬಂಧ ನಿರ್ಣಯ ಮಂಡಿಸಬೇಕು ಎಂದಿದ್ದಾರೆ.
ಚಂದ್ರನ ಅಂಗಳಕ್ಕೆ ವಿಕ್ರಂ ಕಾಲಿಟ್ಟ ಸ್ಥಳವನ್ನು ‘ಶಿವ ಶಕ್ತಿ’ ಎಂದು ಹೆಸರಿಡಲಾಗಿದೆ. ಕೇವಲ ಹೆಸರನ್ನು ಇಟ್ಟರೆ ಮಾತ್ರ ಸಾಲದು, ಆ ಸ್ಥಳವನ್ನು ಅಭಿವೃದ್ಧಿ ಮಾಡಬೇಕು. ಜೊತೆಗೆ ಚಂದ್ರನನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಿ, ‘ಶಿವ ಶಕ್ತಿ’ಯನ್ನು ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು. ಜೊತೆಗೆ ಶಿವ-ಪಾರ್ವತಿಯನ್ನೂ ಅಲ್ಲಿ ಪ್ರತಿಷ್ಠಾಪಿಸಬೇಕು ಎಂದು ಒತ್ತಡ ಹಾಕಿದ್ದಾರೆ. ಚಕ್ರಪಾಣಿ ಅವರ ವಿಡಿಯೋ ಸದ್ಯಕ್ಕೆ ವೈರಲ್ ಆಗಿದೆ.