ಬೆಂಗಳೂರು; ಮೂಡಾ ಹಗರಣ ರಾಜ್ಯ ರಾಜಕೀಯದಲ್ಲಿಯೇ ತಲ್ಲಣ ಸೃಷ್ಟಿಸಿತ್ತು. ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿಯನ್ನು ಅಲ್ಲಾಡಿಸಿತ್ತು. ಸದ್ಯ ಈ ಪ್ರಕರಣದ ತನಿಕೆ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ತನಿಖೆ ಕೈಗೊಂಡಿದ್ದ ಲೋಕಾಯುಕ್ತ ಪೊಲೀಸ್, ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲು ತಯಾರಿ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಲೋಕಾಯುಕ್ತವೂ ನೋಟೀಸ್ ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಗೆ ಅರ್ಹವಲ್ಲದ ಪ್ರಕರಣ ಎನ್ನುವುದು ತಿಳಿದು ಬಂದಿದೆ. ಸಾಕ್ಷ್ಯಾಧಾರಗಳ ಕೊರತೆ ಇರುವ ಕಾತಣ ಬಿ ರಿಪೋರ್ಟ್ ಸಲ್ಲಿಕೆ ಮಾಡುತ್ತಿರುವುದಾಗಿ ನೋಟೀಸ್ ಮೂಲಕ ಮಾಹಿತಿಯನ್ನು ತಿಳಿಸಿದೆ.

ಈ ಸಂಬಂಧ ಲೋಕಾಯುಕ್ತ ವಿರುದ್ಧ ಸ್ನೇಹಮಯಿ ಕೃಷ್ಣ ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಸಾಕ್ಷ್ಯಾಧಾರ ಕೊರತೆಯಿಂದ ಬಿ ರಿಪೋರ್ಟ್ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ತನಿಖೆ ಇನ್ನು ಬಾಕಿ ಇರುವಾಗಲೇ ಬಿ ರಿಪೋರ್ಟ್ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಿದ್ದಾರೆ. ತನಿಖೆ ಮುಕ್ತಾಯಗೊಳಿಸದೆ ಮಧ್ಯಂತರ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ನಾಚಿಕೆಯಾಗಬೇಕು ಎಂದು ಸ್ನೇಹಮಯಿ ಕೃಷ್ಣ ಕಿಡಿಕಾರಿದ್ದಾರೆ.

ಈ ಸಂಬಂಧ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದು, ಯಾವುದೇ ತನಿಖೆಯ ರಿಪೋರ್ಟ್ ಅನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಸುವಾಗ ದೂರುದಾರರಿಗೆ ಮಾಹಿತಿ ನೀಡುವುದು ಸಾಮಾನ್ಯ ಪ್ರಕ್ರಿಯೆ. ಅದರ ಅರ್ಥ ತನಿಖೆ ಪೂರ್ಣಗೊಂಡಿದೆ ಎಂದು. ಮುಂದಿನ ಪ್ರಕ್ರಿಯೆಗಳು ಏನಿದ್ದರೂ ಕೋರ್ಟ್ ನಲ್ಲಿ ನಡೆಯುತ್ತವೆ ಎಂದಿದ್ದಾರೆ.

