ಬೆಂಗಳೂರು: ಬೇಸಿಗೆಯ ಬಿಸಿಲಿನಿಂದ ರಾಜ್ಯದ ಜನತೆಗೆ ಈಗಾಗಲೇ ಮಳೆರಾಯ ತಂಪೆರೆದಿದ್ದಾನೆ. ಇದೀಗ ಮುಂಗಾರು ಮಳೆಯ ಸೂಚನೆಯನ್ನು ನೀಡಲಾಗಿದೆ. ಜೂನ್ 1 ರಿಂದ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಜೂನ್ 13 ಅಥವಾ 14ರಂದು ಮಾನ್ಸೂನ್ ಕೂಡ ಶುರುವಾಗಲಿದೆ. ಜೂನ್ ಮೊದಲ ವಾರದವರೆಗೂ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ.
ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲವು ದಿನದಿಂದ ಮಳೆಯ ಆರ್ಭಟ ನಿಂತಿದೆ. ಆದರೆ ಈ ತಿಂಗಳ ಅಂತ್ಯದ ವೇಳೆಗೆ ಮತ್ತೆ ಮಳೆಯಾಗಲಿದೆ. ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ ಮತ್ತು ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗಲಿದೆ.
ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರದ ಹಲವು ಕಡೆಗಳಲ್ಲಿ ಗಾಳಿಯು ರಭಸವಾಗಿ ಬೀಸಲಿದ್ದು, ಗುಡುಗು ಸಹಿತ ಮಳೆ ಲಘು ಮಳೆಯಾಗಲಿದೆ. ತುಮಕೂರು ಮತ್ತು ವಿಜಯನಗರ ಸೇರಿದಂತೆ ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲೂ ಗಾಳಿ ಸಹಿತ ಭಾರಿ ಮಳೆಯಾಗಲಿದೆ.
ಈಗಾಗಲೇ ಮಳೆ ಉತ್ತಮವಾಗುವ ಮುನ್ಸೂಚನೆ ಸಿಕ್ಕಿರುವ ಕಾರಣ ರೈತರು ಸಂತಸದಲ್ಲಿದ್ದಾರೆ. ಬಿತ್ತನೆ ಮಾಡಿಕೊಳ್ಳುವುದಕ್ಕೆ ಎಲ್ಲಾ ತಯಾರಿಯನ್ನು ನಡೆಸುತ್ತಿದ್ದಾರೆ. ಈ ಬಾರಿ ಉತ್ತಮ ಬೆಳೆ ಕೈ ಸೇರುವ ನಿರೀಕ್ಷೆಯೂ ಇದೆ.