ಸುದ್ದಿಒನ್ : ಮನುಷ್ಯನು ಮನಸ್ಸು ಮಾಡಿದರೆ ಸಾಧಿಸಲಾಗದೆ ಇರುವುದು ಯಾವುದೂ ಇಲ್ಲ. ಆದರೆ ಕೆಲವರು ಸಣ್ಣ ಸಣ್ಣ ವಿಷಯಗಳಿಗೆ ಖಿನ್ನತೆಗೆ ಒಳಗಾಗಿ ಆತ್ಮಸ್ಥೈರ್ಯ ಕಳೆದುಕೊಂಡರೆ ಏನನ್ನೂ ಸಾಧಿಸಲಾಗದೇ ಇದ್ದಲ್ಲಿಯೇ ಇರುತ್ತಾರೆ. ಅದೇ ಆತ್ಮಸ್ಥೈರ್ಯವೊಂದಿದ್ದರೆ ಇದ್ದರೆ ಜಗತ್ತು ನಿಮ್ಮ ಕಾಲಿಗೆ ಬೀಳುತ್ತದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ನಮ್ಮ ಇಸ್ರೋ ವಿಜ್ಞಾನಿಗಳು ಮಾಡಿದ ಚಂದ್ರಯಾನ – 3 ಮತ್ತು ಸೂರ್ಯಯಾನ ಸಾಧನೆ. ಇಂದು ಇಡೀ ಜಗತ್ತೇ ನಮ್ಮತ್ತ ಹುಬ್ಬೇರಿಸುವಂತಾಗಿದೆ.
ಆತ್ಮವಿಶ್ವಾಸವಿಲ್ಲದ ವ್ಯಕ್ತಿ ಯಾವುದೇ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಏಕೆಂದರೆ ಅವನ ಮೇಲೆ ಅವನಿಗೆ ನಂಬಿಕೆಯಿರುವುದಿಲ್ಲ. ಏನು ಮಾಡಿದರೆ ಏನಾಗುತ್ತೋ ಎಂಬ ಭಯ ಅವನನ್ನು ವಿಪರೀತವಾಗಿ ಕಾಡುತ್ತಿರುತ್ತದೆ. ಅದ್ದರಿಂದ ನಾವು ಏನನ್ನಾದರೂ ಸಾಧಿಸಲು ಹೊರಟಾಗ ಆತ್ಮವಿಶ್ವಾಸದ ಕೊರತೆಯಿದ್ದರೆ ಅದೇ ನಮ್ಮ ಮೊದಲ ಶತ್ರುವಾಗುತ್ತದೆ.
ಜಗತ್ತೇ ಒಂದು ಗ್ರಂಥಾಲಯ.ಇಲ್ಲಿ ನಮಗೆ ಗೊತ್ತಿಲ್ಲದ ಪ್ರತಿಯೊಂದನ್ನೂ ತಿಳಿಯಬೇಕು ಮತ್ತು ಕಲಿಯಬೇಕು. ತಪ್ಪುಗಳಾದಾಗ ಮತ್ತೆ ಮತ್ತೆ ಪರಿಶೀಲಿಸಿ, ಎಲ್ಲಿ ಏನಾಯಿತು ? ಯಾಕೆ ಹೀಗಾಯಿತು ? ಎಂದು ತಿಳಿದುಕೊಂಡು ಮತ್ತೆ ತಪ್ಪುಗಳಾಗದ ಹಾಗೆ ಮುಂದೆ ಸಾಗಬೇಕು. ಅದಕ್ಕಾಗಿಯೇ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರಬೇಕು ಮತ್ತು ನಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ಹತ್ತರಲ್ಲಿ ಹನ್ನೊಂದು ಎನ್ನುವಂತಾಗದೇ ವಿಶೇಷ ಆಸಕ್ತಿ ಮತ್ತು ವಿಭಿನ್ನವಾಗಿ ನಾವು ಏನಾದರೂ ಆಲೋಚಿಸಿ ಮಾಡಿದಾಗ ಯಶಸ್ಸು ನಮ್ಮದಾಗುತ್ತದೆ.
ಆನೆಗಳು ಎಷ್ಟೋ ಶಕ್ತಿಶಾಲಿ ಎಂಬುದು ಎಲ್ಲರಿಗೂ ಗೊತ್ತು. ಸೊಂಡಿಲಿನಿಂದ ದೊಡ್ಡ ಮರಗಳನ್ನು ಬೀಳಿಸುತ್ತವೆ. ಅದೇ ಪಳಗಿಸಿದಾಗ ಆನೆ ಮಾವುತ ಹೇಳಿದಂತೆ ಮಾಡುತ್ತವೆ.
ಚಿಕ್ಕ ಆನೆಯನ್ನು ಮಾವುತನು ತಂದು ಬೆಳೆಸುವಾಗ ಸರಪಳಿಯಿಂದ ಕಟ್ಟುತ್ತಾನೆ. ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹಾಗೇ ಅದು ಆಗಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಕಬ್ಬಿಣದ ಸರಪಳಿಯಾದ್ದರಿಂದ ಸಾಧ್ಯವಾಗುವುದಿಲ್ಲ. ಕ್ರಮೇಣ ಆನೆಯು ತನ್ನ ಕ್ರಮೇಣ ಪ್ರಯತ್ನವನ್ನು ನಿಲ್ಲಿಸಿಬಿಡುತ್ತದೆ. ಈ ಸರಪಳಿಯಿಂದ ತಪ್ಪಿಸಿಕೊಳ್ಳಲು ಆಗುವುದೇ ಇಲ್ಲ ಎಂದು ಆತ್ಮವಿಶ್ವಾಸವನ್ನೆ ಕಳೆದುಕೊಂಡು ಬಿಡುತ್ತದೆ.
ಆನೆ ದೊಡ್ಡದಾದ ಮೇಲೂ ಚಿಕ್ಕ ಹಗ್ಗದಿಂದ ಕಟ್ಟಿದರೂ ಕಬ್ಬಿಣದ ಸರಪಳಿ ಎಂಬ ಭ್ರಮೆಯಲ್ಲಿಯೇ ಅದು ಪ್ರಯತ್ನ ಮಾಡುವುದಿಲ್ಲ. ಆತ್ಮವಿಶ್ವಾಸದ ಕೊರತೆಯಿಂದ ಆ ಹಂತಕ್ಕೆ ತಲುಪಿಬಿಡುತ್ತದೆ.
ಅದಕ್ಕಾಗಿಯೇ ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಸಾಧನೆಯ ಹಾದಿಯಲ್ಲಿ ಭಾವನೆಗಳು, ಬಂಧಗಳು, ಸಂಬಂಧಗಳನ್ನು ಕೆಲವೊಮ್ಮೆ ಬಿಡಬೇಕಾಗಿ ಬರುತ್ತದೆ. ನಮಗೆ ನಾವೇ ಮಾವುತರಾಗಬೇಕು. ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳಬೇಕು. ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಗುರಿಯೆಡೆಗೆ ನಮ್ಮ ಗಮನವಿರಬೇಕು. ಸುತ್ತಮುತ್ತಲಿನವರು ಯಾರೇ ಇರಲಿ, ಯಾರ ಮಾತನ್ನೂ ಕೇಳಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ಗೆಲುವನ್ನು ನಿಮ್ಮದಾಗಿಸಿಕೊಳ್ಳಿ.
ಬದುಕಿನ ಯಾವುದೇ ಯುದ್ದ ಗೆಲ್ಲಬೇಕೆಂದರೆ ಆತ್ಮವಿಶ್ವಾಸವೆಂಬ ಆಯುಧವಿದ್ದರೇ ಸಾಕು ಗೆಲುವು ನಮ್ಮದೇ.