ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿ. 02 : ಮಠಾಧೀಶರುಗಳು ರಾಜಕೀಯ ವಿಷಯದ ಬಗ್ಗೆ ಪ್ರಚಾರ ಹಾಗೂ ಅದರ ಬಗ್ಗೆ ಮಾತನಾಡಬಾರದು ಎನ್ನುವಂತಾದರೆ ಚುನಾವಣಾ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರುಗಳು ನಮ್ಮ ಮಠಗಳಿಗೆ ಬಂದು ನಿಮ್ಮ ಸಮುದಾಯದ ಮತಗಳನ್ನು ನಮಗೆ ಕೊಡಿಸಿ ಎಂದು ಹೇಳುವುದು ಬಿಡಬೇಕು.ಆಗ ಮಾತ್ರ ಮಠಾಧೀಶರಗಳು ಮಠದಲ್ಲಿ ಇದ್ದು ನಮ್ಮ ಕೆಲಸಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕರದಾಳನ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮಿಜಿ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಸರ್ಕಾರಗಳು ಮಾಡದೇ ಇರುವಂತಹ ಅನೇಕ ಕೆಲಸಗಳನ್ನು ರಾಜ್ಯದ ವಿವಿಧ ಮಠಗಳು ಮಾಡಿವೆ. ಅಂದರೆ ಶಿಕ್ಷಣ, ಅನ್ನ ದಾಸೋಹ, ಬಡ ಮಕ್ಕಳಿಗೆ ಆಶ್ರಯ, ಸಾಮೂಹಿಕ ವಿವಾಹಗಳತಂಹ ಕಾರ್ಯಗಳನ್ನು ನಾಡಿನ ಹಲವಾರು ಮಠಗಳು ಮಾಡಿವೆ… ಇದಕ್ಕೆ ಸರ್ಕಾರ ಮಠಗಳಿಗೆ ಕೃತಜ್ಞತೆಯನ್ನು ತೋರಿಸಬೇಕಿದೆ ಎಂದ ಶ್ರೀಗಳು, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನದಲ್ಲಿ ಹಾಗೂ ಬದಲಾವಣೆ ಮುಖ್ಯವಾಗಿದೆ.. 2013 ರಿಂದ 2018 ರವರೆಗೆ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಅಧಿಕಾರವನ್ನು ಸಹ ಅನುಭವಿಸಿದ್ದಾರೆ.2023 ರ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಮುಂದೆ ಆಗಿರುವ ಒಪ್ಪಂದದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಸ್ಥಾನ ಬಿಟ್ಟುಕೊಟ್ಟು ಬೇರೆಯವರಿಗೂ ಅವಕಾಶ ಮಾಡಿಕೊಡಬೇಕಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನ ಎಂಬುದು ಶಾಶ್ವತವಲ್ಲ.. ಅವಕಾಶ ಬಂದಾಗ ಅಧಿಕಾರದ ಸದುಪಯೋಗ ಮಾಡಿಕೊಂಡು ಬೇರೆಯವರು ಸಹ ಬೆಳೆಯುವುದಕ್ಕೂ ಅವಕಾಶ ಮಾಡಿಕೊಡಬೇಕಿದೆ. ಸಿದ್ದರಾಮಯ್ಯರವರ ಸಚಿವ ಸಂಪುಟದಲ್ಲಿ ಈಡಿಗ ಸಮುದಾಯದ ಓರ್ವ ಮಂತ್ರಿ ಇದ್ದಾರೆ.. ಅವರನ್ನು ಸೇರಿದಂತೆ ನಮ್ಮ ಸಮುದಾಯಕ್ಕೆ ಮತ್ತೊಂದು ಮಂತ್ರಿ ಸ್ಥಾನ ನೀಡಬೇಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿವೆ… ಶಿವಮೊಗ್ಗ, ಕಾರವಾರ, ಉಡುಪಿ ಮಂಗಳೂರು ಕಡೆಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ ಅಲ್ಲಿ ನಮ್ಮ ಸಮುದಾಯದವರು ಸ್ಪರ್ಧಿಸಲು ಮುಂದಿನ ಚುನಾವಣೆ ಸಂದರ್ಭದಲ್ಲಿ ನಮ್ಮ ಸಮುದಾಯದವರಿಗೆ ಹೆಚ್ಚಿನ ಟಿಕೆಟ್ ನೀಡಬೇಕು. ಒಂದು ಪಕ್ಷ ಈ ಪಕ್ಷಗಳು ನಮ್ಮ ಸಮುದಾಯಕ್ಕೆ ಟಿಕೆಟ್ ನೀಡದೇ ಹೋದರೆ ನಮ್ಮ ಸಮುದಾಯದವರಿಂದಲೇ ಸ್ವಾತಂತ್ರ್ಯ ಪಕ್ಷವನ್ನು ಸ್ಥಾಪಿಸುವ ಮನೋಭಾವ ನಮ್ಮಲ್ಲಿ ಇದೆ.ಇದರ ಬಗ್ಗೆ ನಮ್ಮ ಸಮುದಾಯದ ಮುಖಂಡರೊಂದಿಗೆ ಈಗಾಗಲೇ ಎರಡು ಮೂರು ಬಾರಿ ಸಮಾಲೋಚನೆಯನ್ನು ಮಾಡಲಾಗಿದೆ ಎಂದು ಸ್ವಾಮಿಜಿ ಕೇರಳದಲ್ಲಿ ಈಗಾಗಲೇ ನಮ್ಮ ಸಮುದಾಯದವರೇ ಸ್ವತಂತ್ರ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ.. ಅದೇ ಮಾದರಿಯನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಸಹ ಸ್ವತಂತ್ರ ಪಕ್ಷವನ್ನು ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದಿಂದ ಸ್ಥಾಪನೆ ಮಾಡುವ ಆಲೋಚನೆಯಿದೆ ಎಂದು ತಿಳಿಸಿದರು.
