ಚಿತ್ರದುರ್ಗ : ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮೂರು ಪಕ್ಷದವರು ಹೈಪರ್ ಆಕ್ಟೀವ್ ಆಗಿದ್ದಾರೆ. ಜನರ ಬಳಿ ತಮ್ಮ ತಮ್ಮ ಯೋಜನೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರ ಜೊತೆಗೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಟ ಶಶಿಕುಮಾರ್ ಬಿಜೆಪಿಗೆ ಸೇರಿದ್ದು ಗೊತ್ತೆ ಇದೆ. ಈಗ ಚುನಾವಣೆಗೆ ನಿಲ್ಲುವ ಹುಮ್ಮಸ್ಸು ಅವರಲ್ಲಿದ್ದು, ಚಿತ್ರದುರ್ಗದಲ್ಲಿ ಸಿಕ್ಕಾಪಟ್ಟೆ ಓಡಾಡ ನಡೆಸುತ್ತಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಶಶಿಕುಮಾರ್ ಮಂಗಳವಾರ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ. ಮಾದಾರ ಚೆನ್ನಯ್ಯ ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಶಿಕುಮಾರ್, ಮೊಳಕಾಲ್ಮೂರು ಹಾಗೂ ಚಳ್ಳಕೆರೆಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎರಡು ಕಡೆ ಪರಿಶಿಷ್ಠ ಪಂಗಡಕ್ಕೆ ಸೇರಿದ ಮೀಸಲು ಕ್ಷೇತ್ರವಿದೆ. ಹೈಕಮಾಂಡ್ ಯಾವ ಕ್ಷೇತ್ರವನ್ನು ನಿರ್ಧರಿಸಿ ನೀಡುತ್ತದೆಯೋ ಅಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಎರಡು ಕ್ಷೇತ್ರದಲ್ಲಿ ಎಲ್ಲಿಯೇ ಟಿಕೆಟ್ ನೀಡಿದರು, ಅಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ. ಸದ್ಯ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಪಕ್ಷ ಸಂಘಟನೆ ಮಾಡುವುದಕ್ಕೆ ಸೂಚನೆ ನೀಡಿದ್ದಾರೆ. ಹೀಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚರಿಸಿ, ಪಕ್ಷ ಬಲವರ್ಧನೆ ಕೆಲಸ ಮಾಡುತ್ತಿದ್ದೇನೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮುಂದಿನ ಬಾರಿಯ ವಿಧಾನಸಭಾ ಚುನವಾಣೆಯಲ್ಲಿ ಚಳ್ಳಕೆರೆ ಅಥವಾ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ಬಾರಿ ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ಶ್ರೀರಾಮುಲು ಅವರಿಗೆ ಬಳ್ಳಾರಿ ಟಿಕೆಟ್ ನೀಡಿದರೆ, ಶಶಿಕುಮಾರ್ ಅವರಿಗೆ ಮೊಳಕಾಲ್ಮೂರು ಕ್ಷೇತ್ರ ಸಿಗುವುದು ಬಹಳ ಸುಲಭ ಎನಿಸುತ್ತದೆ.