ಸುದ್ದಿಒನ್, ಮೊಳಕಾಲ್ಮೂರು, ಜುಲೈ. 26 : ತಾಲ್ಲೂಕಿನ ರಾಂಪುರ ಸಮೀಪದ ಗ್ರ್ಯಾಂಡ್ ಹೋಟೆಲ್ ಎದುರು ಇಂದು (ಜುಲೈ 26 ರ) ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಆರೇಳು ವರ್ಷದ ಗಂಡು ಕರಡಿ ತೀವ್ರ ರಕ್ತಸ್ರಾವದಿಂದ ದಾರುಣವಾಗಿ ಮೃತಪಟ್ಟಿದೆ.
ಬೆಂಗಳೂರು – ಬಳ್ಳಾರಿ ಹೆದ್ದಾರಿಯಲ್ಲಿ ರಾತ್ರಿ ವಾಹನ ಸವಾರರು ಸೂಚನ ಫಲಕಗಳಿದ್ದರೂ ಅತೀ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಅಪರಿಚಿತ ವಾಹನ ಕರಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಕರಡಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ಗುಡ್ಡ ಪ್ರದೇಶ ಮತ್ತು ಕಾಯ್ದಿಟ್ಟ ಅರಣ್ಯ ಪ್ರದೇಶ ಹೊಂದಿಕೊಂಡಂತೆ ಸುತ್ತಮುತ್ತ ಬೃಹತ್ ಕಲ್ಲು ಬಂಡೆಗಳ ಗುಡ್ಡಗಾಡು ಇರುವುದರಿಂದ ವನ್ಯಜೀವಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಕರಡಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದಿದೆ
ಅಪಘಾತ ರಭಸಕ್ಕೆ ಕರಡಿ ಹೆದ್ದಾರಿಯಲ್ಲೇ ಕೊನೆಯುಸಿರೆಳೆದಿದೆ. ಮತ್ತೊಂದು ಕಡೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಿರತೆ, ಕರಡಿ, ಜಿಂಕೆ ಇನ್ನಿತರ ಕಾಡುಪ್ರಾಣಿಗಳು ರಸ್ತೆ ಅಪಘಾತಕ್ಕೆ ಸಿಲುಕಿ ಮೃತಪಡುತ್ತಿರುವುದು ಆತಂಕ ಮೂಡಿಸಿದೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್, ಪ್ರಧಾನ ಕಾರ್ಯದರ್ಶಿ ಟಿ.ರುದ್ರಮುನಿ, ಉಪಾಧ್ಯಕ್ಷರಾದ ಓಂಕಾರಪ್ಪ, ಕಾನೂನು ಸಲಹೆಗಾರರಾದ ಶಿವಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

