ಶಿವಮೊಗ್ಗ: ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಅಖಾಡದಲ್ಲಿ ನಿಂತಿದ್ದಾರೆ. ಆರಂಭದಿಂದಲೂ ಪ್ರಧಾನಿ ಮೋದಿಯವರ ಫೋಟೋವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಬಿಜೆಪಿ ನಾಯಕರು ಇದಕ್ಕೆ ಸಿಡಿಮಿಡಿಗೊಂಡು ಕೋರ್ಟ್ ಮೊರೆ ಕೂಡ ಹೋಗಿದ್ದರು. ಇದೀಗ ಕೋರ್ಟ್ ನಲ್ಲೂ ಈಶ್ವರಪ್ಪ ಅವರಿಗೆ ಜಯ ಸಿಕ್ಕಿದ್ದು, ಫೋಟೋ ಬಳಕೆಗೆ ಅನುಮತಿ ಸಿಕ್ಕಿದೆ.
ಈ ಬಗ್ಗೆ ಇಂದು ಮಾತನಾಡಿರುವ ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ನನ್ನ ಹೃದಯದಲ್ಲಿದ್ದಾರೆ. ಅವರ ಫೋಟೋವನ್ನು ನಾನು ಬಳಸಬಾರದೆಂದು ಬಿಜೆಪಿ ಕೋರ್ಟ್ ಮೊರೆ ಹೋಗಿತ್ತು. ಆದರೆ ಪ್ರಧಾನಿ ಮೋದಿಯ ಫೋಟೋ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ. ಬಿಜೆಪಿಯವರು ಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಫೋಟೋ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ. ಇದರಿಂದ ಬಿಜೆಪಿಯವರಿಗೆ ಎರಡು ಕಡೆ ಹಿನ್ನಡೆಯಾಗಿದೆ. ಇದರಿಂದ ನನಗೆ ಸಂತೋಷವಾಗಿದೆ ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ಹಾಗೂ ರಾಘವೇಂದ್ರ ಕುತಂತ್ರ ಮಾಡಿದ್ದಾರೆ. ಬುಧವಾರ ಶಿರಾಳಕೊಪ್ಪದಲ್ಲಿ ನನ್ನ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇದೇ ರೀತಿ ಮುಂದುವರೆದರೆ ತಕ್ಕ ಉತ್ತರ ನೀಡುತ್ತೇನೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗೀತಾ ಶಿವರಾಜ್ ಕುಮಾರ್ ಹಾಗೂ ಬಿವೈ ರಾಘವೇಂದ್ರ ಅವರ ನಡುವೆ ಸ್ಪರ್ಧೆ ಇತ್ತು. ಆದರೆ ಈ ಬಾರಿ ಬಿಜೆಪಿಯಿಂದಾನೆ ಬಂಡಾಯವೆದ್ದು ಈಶ್ವರಪ್ಪ ಅವರೇ ಸ್ಪರ್ಧೆ ನಡೆಸಿದ್ದು, ಶಿವಮೊಗ್ಗ ಅಖಾಡ ಬೇಸುಗೆ ಬಿಸಿಲಿಗಿಂತ ಲೋಕಸಭೆಯ ಕಾವನ್ನು ಹೆಚ್ಚಾಗಿಸಿದೆ.