ನವದೆಹಲಿ: ಸಂಸತ್ ನಲ್ಲಿ ಕಲರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರತಿಭಟನೆ ಮುಂದುವರೆದಿದೆ. ಜೊತೆಗೆ ಸಂಸದರ ಅಮಾನತು ಪ್ರಕ್ರಿಯೆ ಕೂಡ ಮುಂದುವರೆದಿದೆ. ಅದರಲ್ಲಿ ಇಂದು ಸಂಸದ ಡಿಕೆ ಸುರೇಶ್ ಸೇರಿದಂತೆ ಇಂದು ಕೂಡ ಮೂವರನ್ನು ಅಮಾನತು ಮಾಡಿದ್ದು, ಅಮನತುಗೊಂಡ ಸಂಸದರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.
ಇಂದು ಅಮಾನತುಗೊಂಡವರು, ಡಿಕೆ ಸುರೇಶ್, ನಕುಲ್ ನಾಥ್, ದೀಪಕ್ ಬೈಚಕ್ ಆಗಿದ್ದಾರೆ. ಅಮಾನತುಗೊಂಡ ಬಳಿಕ ಮಾತನಾಡಿದ ಡಿಕೆ ಸುರೇಶ್, ಪ್ರಜಾಪ್ರಭುತ್ವದ ದೇಗುಲದ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಗೃಹ ಸಚಿವರು ಮತ್ತು ಪ್ರಧಾನಿಗಳು ಈ ಬಗ್ಗೆ ಮಾತನಾಡಬೇಕು. ಸಂಸತ್ ಪ್ರವೇಶಿಸಲು ಪಾಸ್ ನೀಡಿದವರನ್ನು ತನಿಖೆಗೆ ಒಳಪಡಿಸಬೇಕು. ಭದ್ರತಾ ಲೋಪದ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಇಲ್ಲಿ ಸಂಸದರಿಗೆ ರಕ್ಷಣೆ ಇಲ್ಲ ಬೇರೆಯವರಿಗೆ ಹೇಗೆ ಎಂದು ಪ್ರಶ್ನೆ ಮಾಡಿದ್ದೆವು ಎಂದಿದ್ದಾರೆ.
ಲೋಕಸಭೆಯಲ್ಲಿ ಈ ಸಂಬಂಧ ಚರ್ಚೆ ಮಾಡುವುದಕ್ಕೆ ಅವಕಾಶ ಕೇಳಿದೆವು. ಮಾತನಾಡುವ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ ಎಂದು ಬಾವಿಗಿಳಿದು ಪ್ರತಿಭಟನೆ ಮಾಡಿದೆವು. ಹೀಗಾಗಿ ಇಂದು ಮೂವರನ್ನು ಅಮಾನತು ಮಾಡಲಾಗಿದೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅದನ್ನು ಕಿತ್ತುಕೊಳ್ಳಲಾಗುತ್ತಿದೆ. ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಆಡಳಿತ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಜನರನ್ನು ಅಮಾನತು ಮಾಡಿರುವುದು. ಈ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು ಎಂದು ಸಂಸದ ಡಿಕೆ ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.