ಸುದ್ದಿಒನ್, ಹಿರಿಯೂರು, ಅಕ್ಟೋಬರ್. 05 : ಮತಗಳ್ಳತನ ಮಾಡುವ ಮೂಲಕ ಬಿಜೆಪಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯುತ್ತಿದೆ. ಮೋದಿ ಅವರು ಮತಗಳ್ಳತನದಿಂದ ಪ್ರಧಾನಿಯಾಗಿದ್ದಾರೆ. ಕೇವಲ 24 ಕ್ಷೇತ್ರಗಳಲ್ಲಿ ಅವರು ಸೋತಿದ್ದರೆ ಅವರು ಪ್ರಧಾನಿಯಾಗುತ್ತಿರಲಿಲ್ಲ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಮಯೂರ ಜಯ ಕುಮಾರ್ ಬಿಜೆಪಿ ವಿರುದ್ಧ ಗುಡುಗಿದರು.
ನಗರದ ಕಾಂಗ್ರೆಸ್ ಕಛೇರಿ ಮುಂಭಾಗದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಸುಳ್ಳು ಹೆಸರು ಇರುವುದನ್ನು ಕಾಂಗ್ರೆಸ್ ಪಕ್ಷ ದಾಖಲೆ ಸಮೇತ ಜನರ ಮುಂದಿಟ್ಟಿದೆ. ಒಬ್ಬ ಮತದಾರ ಎರಡ್ಮೂರು ಬೂತ್ ಗಳಲ್ಲಿ ವೋಟ್ ಹಾಕಿರುವುದು ಪತ್ತೆಯಾಗಿದೆ. ಆದರೆ ಚುನಾವಣಾ ಆಯೋಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ? ಎಂದು ಪ್ರಶ್ನಿಸಿದರು.
ಸ್ವಾತಂತ್ರ ಹೋರಾಟಗಾರರು ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಸೂಕ್ತ ಎಂದಿದ್ದರು. ಕಾಂಗ್ರೆಸ್ ಮತ್ತು ಗಾಂಧೀಜಿಯವರ ಹೋರಾಟದ ಫಲವಾಗಿ ಬ್ರಿಟಿಷರಿಂದ ಸ್ವಾತಂತ್ರ ಪಡೆದಿದ್ದೇವೆ. ಕಾಂಗ್ರೆಸ್ ಪಕ್ಷ
ಅಧಿಕಾರದಲ್ಲಿ ಇರುವವರೆಗೂ ಚುನಾವಣೆ ಆಯೋಗದ ಸಾಂವಿಧಾನಿಕ ಚೌಕಟ್ಟಿಗೆ ಧಕ್ಕೆ ಉಂಟಾಗಿರಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ಆಯೋಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ ಎಂದು ವಾಗ್ದಳಿ ನಡೆಸಿದರು.
ಹರಿಯಾಣ,ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿದ್ದವು. ಕೊನೆಗೆ ಮತಗಳ್ಳತನದಿಂದ ಅಧಿಕಾರ ಹಿಡಿದಿದ್ದಾರೆ. ಕೇಂದ್ರ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕಿದೆ. ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಚುನಾವಣೆ ಅಕ್ರಮಗಳನ್ನು ಸಾಕ್ಷಿ ಸಮೇತ ಬಯಲು ಮಾಡಿದೆ. ಸಂಸದ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದಲ್ಲಿ ಒಂದು ಲಕ್ಷ ಮತಗಳ ಹಗರಣವಾಗಿರುವ ಬಗ್ಗೆ ಹೊರ ತೆಗೆದಿದ್ದಾರೆ. ಚುನಾವಣೆ ಅಕ್ರಮಗಳನ್ನು ನಿಲ್ಲಿಸಲು ಜನರು ಮುಂದೆ ಬರಬೇಕಿದೆ. ನಮ್ಮ ಹಕ್ಕನ್ನು ಕಿತ್ತುಕೊಳ್ಳುವವರ ವಿರುದ್ಧ ಹೋರಾಡಬೇಕು ಆಗ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗುತ್ತದೆ. ಈ ಸಹಿ ಸಂಗ್ರಹ ಅಭಿಯಾನದಿಂದ ನಮ್ಮ ಶಕ್ತಿಯನ್ನು ತೋರಿಸಬೇಕು. ಎಲ್ಲೆಲ್ಲಿ ಮತಗಳ್ಳತನ ಆಗುತ್ತದೆ ಅಲ್ಲಲ್ಲಿ ಕೆಲಸ ಮಾಡುತ್ತೇವೆ ಅಂತ ಪಣತೊಟ್ಟಾಗ ಮಾತ್ರ ಬಿಜೆಪಿ ಎದುರಿಸಲು ಸಾಧ್ಯ. ಜೊತೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಲಕ್ಷ ಸಹಿ ಸಂಗ್ರಹ ಮಾಡಿ ಕಳಿಸಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ 2024ರಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ದಾಖಲೆ ಸಮೇತ ರಾಹುಲ್ ಗಾಂಧಿ ತೋರಿಸಿದ್ದಾರೆ. ಹಿರಿಯೂರಿನಲ್ಲಿ ನಾನು 30 ಸಾವಿರ ಮತಗಳ ಅಂತರದಿಂದ ಗೆಲುವು ಪಡೆದಿದ್ದೇನೆ. ಆದರೆ 2024 ಎಂಪಿ ಚುನಾವಣೆಯಲ್ಲಿ 6000 ಸಾವಿರ ಮತಗಳ ಹಿನ್ನಡೆಯಾಗಿದೆ. ಪ್ರತಿ ಬೂತ್ ನಲ್ಲೂ ಎಷ್ಟು ವೋಟ್ ಗಳು ಇದಾವೆ ಎಂಬುದನ್ನು ಕಾರ್ಯಕರ್ತರು ಚೆಕ್ ಮಾಡಬೇಕು. ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು, ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು 12 ವರ್ಷ ಕಳೆದರೂ, ಬಡವರ ಪರವಾದ ಒಂದು ಯೋಜನೆಗಳಿಲ್ಲ, ಅಭಿವೃದ್ಧಿಯಲ್ಲಿ ಶೂನ್ಯ. ಈ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಕೈ ಕಾರ್ಯಕರ್ತರು ಮುಂದಾಗಬೇಕು ಎಂದರು.
ಮಾಜಿ ಸಂಸದ ಬಿಎನ್. ಚಂದ್ರಪ್ಪ ಮಾತನಾಡಿ, ಬಿಜೆಪಿ ಯಾವ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮತಗಳ್ಳತನ ಮಾಡುವುದೇ ಬಿಜೆಪಿ ಸಾಧನೆ. ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಒಬ್ಬರೇ ಹೋರಾಡುತ್ತಿದ್ದು, ನಾವು ಕೈ ಜೋಡಿಸೋಣ ಎಂದರು.
ಶಾಸಕ ಟಿ. ರಘುಮೂರ್ತಿ, ಎಂಎಲ್ಸಿ ಡಿಟಿ ಶ್ರೀನಿವಾಸ್, ಮುರಳಿಧರ್ ಹಾಲಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಆದಿ ಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿಎಸ್ ಮಂಜುನಾಥ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ. ಯೋಗೇಶ್ ಬಾಬು, ನಗರಸಭೆ ಅಧ್ಯಕ್ಷ ಆರ್ ಬಾಲಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಸಂಪತ್ ಕುಮಾರ್, ಮಾಜಿ ಜಿಪಂ ಅಧ್ಯಕ್ಷೆ ಗೀತಾ ನಂದಿನಿಗೌಡ, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಮಾಜಿ ಜಿಪಂ ಸದಸ್ಯ ಆರ್ ನಾಗೇಂದ್ರ ನಾಯ್ಕ, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂಡಿ ಸಣ್ಣಪ್ಪ, ಮಮತಾ, ರತ್ನಮ್ಮ, ವಿಠ್ಠಲ್, ಸದಸ್ಯೆ ಶಿವರಂಜನಿ, ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್, ಕೃಷ್ಣಮೂರ್ತಿ, ಮುಖಂಡರಾದ ಜ್ಞಾನೇಶ್, ಶಿವಕುಮಾರ್, ಜ್ಯೋತಿ ಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
