ಚಿತ್ರದುರ್ಗ ರೈಲ್ವೇ ನಿಲ್ದಾಣ ಆಧುನೀಕರಣ | ಜೂನ್‌ ವೇಳೆಗೆ ಎರಡು ಕಡೆ ರೈಲ್ವೇ ಸೇತುವೆ ನಿರ್ಮಾಣ | ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

2 Min Read

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರ ಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿ, ರೈಲ್ವೇ ಮಂಡಳಿ ಅನುಮೋದನೆಗಾಗಿ ಕಳುಹಿಸಿ ಕೊಡಲಾಗಿದೆ. ಮಂಡಳಿ ಶೀಘ್ರವೇ ಯೋಜನಗೆ ಅನುಮೋದನೆ ನೀಡಲಿದ್ದು, ಜೂನ್ ವೇಳೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಸಿ.ವಿರೇಂದ್ರಪಪ್ಪಿ ಭರವಸೆ ವ್ಯಕ್ತಪಿಡಿಸಿದರು.

ಅಮೃತ ಭಾರತ ರೈಲ್ವೇ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ರೂ.41 ಸಾವಿರ ಕೋಟಿ ವೆಚ್ಚದಲ್ಲಿ ದೇಶದ ವಿವಿಧ 554 ಪ್ರಮುಖ ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿ, 1500 ಮೇಲು ಹಾಗೂ ಕೆಳಸೇತುವೆ‌ಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಯೋಜನೆಗೆ ಸೋಮವಾರ ಪ್ರಧಾನಮಂತ್ರಿ ನರೆಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಅಮೃತ ಯೋಜನೆ ಅಡಿ ರೂ.11.78 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ನಗರದ ರೈಲ್ವೇ ನಿಲ್ದಾಣವನ್ನು ಸಹ ನವೀಕರಣಸಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರ ಅಂಗವಾಗಿ ನಗರದ ರೈಲ್ವೇ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕ ವೀರೇಂದ್ರ ಪಪ್ಪಿ ಪಾಲ್ಗೊಂಡು ಮಾತನಾಡಿದರು.

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಳ್ಳುವ ಹಂತದಲ್ಲಿದೆ. ವರ್ಷಾಂತ್ಯದ ವೇಳೆ ನೇರ ರೈಲ್ವೇ ಯೋಜನೆಯ ಕಾಮಗಾರಿ ಆರಂಭವಾಗಲಿದೆ. ಚಿತ್ರದುರ್ಗ ರೈಲ್ವೇ  ನಿಲ್ದಾಣ ಪುನರಾಭಿವೃದ್ಧಿ ಯೋಜನೆ ಜಿಲ್ಲೆಗೆ ಪ್ರಧಾನಿಗಳ ಅತಿದೊಡ್ಡ ಕೊಡುಗೆಯಾಗಿದೆ. ಸು.12 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮಾಡಲಾಗುವುದು. ನೈರುತ್ಯ ರೈಲ್ವೇ ವಿಭಾಗದಲ್ಲಿ ಒಟ್ಟು 31 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಚಿತ್ರದುರ್ಗ ಇದರಲ್ಲಿ ಸೇರಿರುವುದಕ್ಕೆ ಸಂತಸವಾಗಿದೆ. ಚಿತ್ರದುರ್ಗದಲ್ಲಿ ರೈಲ್ವೇ ಹಾಸ್ಪಿಟಲ್ ಸಹ ನಿರ್ಮಿಸಲು ಬೇಡಿಕೆಯ ಕೂಗು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ರೈಲ್ವೇ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನ ಪಡುವುದಾಗಿ ಶಾಸಕ ವೀರೇಂದ್ರ ಪಪ್ಪಿ ತಿಳಿಸಿದರು.

ನವೀನ ಆಧುನಿಕ ರೈಲ್ವೇ ನಿಲ್ದಾಣ :

ಚಿತ್ರದುರ್ಗ ರೈಲ್ವೇ ನಿಲ್ದಾಣವನ್ನು, ಅಮೃತ ಭಾರತ ರೈಲ್ವೇ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ನವೀನ ಹಾಗೂ ಆಧುನಿಕರಣಗೊಳಿಸಲಾಗುತ್ತಿದೆ. ರೂ. 11.78 ಕೋಟಿ ವೆಚ್ಚದಲ್ಲಿ ವಿಶಾಲವಾದ ರೈಲ್ವೇ ಬುಕಿಂಗ್ ಕಚೇರಿ, ಪ್ಲಾಟ್ ಫಾರಂ, ಸುಸಜ್ಜಿತವಾದ ಶೌಚಾಲಯಗಳು, ಶಿಶು ಹಾರಕೈ ಕೇಂದ್ರ, ವಿಐಪಿ‌ ಲಾಂಜ್,ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳು, ಕೋರಿಯರ್ ಹಾಗೂ ಪಾರ್ಸಲ್ ಸೇವಾ ಕೇಂದ್ರಗಳು, ಕ್ಲೋಕ್ ರೂಮ್, ಕಫೆಟೇರಿಯಾ, ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಸಿಸಿಟಿವಿ, ಉಚಿತ ವೈಫೈ, ಎಟಿಎಂ ಕೇಂದ್ರಗಳ ನಿರ್ಮಾಣದ ಜೊತೆಗೆ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸ್ನೇಹಿಯಾಗಿ ರೈಲ್ವೇ ನಿಲ್ದಾಣ ಅಭಿವೃದ್ಧಿಯಾಗಲಿವೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ ಸಂದೇಶ ಭಾಷಣವನ್ನು ಈ ಸಂದರ್ಭದಲ್ಲಿ ಪ್ರಸಾರ ಮಾಡಲಾಯಿತು. ಈ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕೇಂದ್ರದ ರೈಲ್ವೇ, ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷವ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಂತ್ರಿಗಳು, ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,ನೈರುತ್ಯ ರೈಲ್ವೇ ಮುಖ್ಯ ಇಂಜಿನಿಯರ್ ಟಿ.ವಿ.ಭೂಷಣ್, ಹಿರಿಯ ವಿಭಾಗೀಯ ಇಂಜಿನಿಯರ್ ಬಿ.ರೋಹನ್ ಡೊಂಗ್ರೇ, ಡಿಎಸ್‌ಓ ಚಂದ್ರಶೇಖರ್ ಕಂಬಾಳಿ ಮಠ್, ಮುಖಂಡರಾದ ಮುರುಳಿ, ನಗರ ಸಭಾ ಸದಸ್ಯರಾದ ವೆಂಕಟೇಶ, ತಾರಕೇಶ್ವರಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.  ನವ ಭಾರತೀಯ ರೈಲ್ವೇ ಕಲ್ಪನೆ ಕುರಿತು ಮಕ್ಕಳಿಗಾಗಿ ಏರ್ಪಡಿಸಲಾದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Share This Article
Leave a Comment

Leave a Reply

Your email address will not be published. Required fields are marked *