ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 13 : ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಚುನಾವಣೆ ಬಗ್ಗೆ ಪರಿಕಲ್ಪನೆ ಮೂಡಿಸಿದಾಗ ಮುಂದೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್ ಹೇಳಿದರು.
ಬಾಪೂಜಿ ಪಬ್ಲಿಕ್ ಸ್ಕೂಲ್‍ನಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಮಂತ್ರಿಮಂಡಲದ ಅಣಕು ಚುನಾವಣೆ ಕುರಿತು ಮಾತನಾಡಿದರು.
ಚುನಾವಣೆಗಳು ಹೇಗೆ ನಡೆಯುತ್ತದೆ ಎನ್ನುವ ಸಮಗ್ರ ಮಾಹಿತಿಯನ್ನು ಮಕ್ಕಳಿಗೆ ನೀಡಿದಾಗ ಅರ್ಹರನ್ನು ಆಯ್ಕೆ ಮಾಡಿ ಸದೃಢ ಸಮಾಜ ನಿರ್ಮಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಚುನಾವಣೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ನಾಯಕರುಗಳನ್ನು ಹಾಗೂ ಶಾಲಾ ನಾಯಕನನ್ನು ಆಯ್ಕೆ ಮಾಡಿದರು.
ಸಂಸ್ಥೆಯ ನಿರ್ದೇಶಕರಾದ ಕೆ.ಎಂ.ಚೇತನ್‍ರವರ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ವಿಭಾಗದ ಶಿಕ್ಷಕರುಗಳು ಅಚ್ಚುಕಟ್ಟಾಗಿ ಚುನಾವಣೆಯನ್ನು ನಡೆಸಿಕೊಟ್ಟರು.
ಇ.ವಿ.ಎಂ. ತಂತ್ರಜ್ಞಾನದಲ್ಲಿ ಹಾಗೂ ಮತದಾನದ ಚೀಟಿಯ ಮೂಲಕ ಮಕ್ಕಳು ಮತ ಚಲಾಯಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣೆಯ ಫಲಿತಾಂಶದ ನಂತರ ವಿದ್ಯಾರ್ಥಿ ನಾಯಕರುಗಳು ಪ್ರಮಾಣ ವಚನ ಸ್ವೀಕರಿಸಿದರು.
ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮೇಘನಾ ಚೇತನ್, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಅಣಕು ಚುನಾವಣೆಯಲ್ಲಿ ಹಾಜರಿದ್ದರು.
















